ಜಿಲ್ಲೆ

ತೆರಿಗೆ ಕಾಯ್ದೆ ಸರಳೀಕರಣ ಸ್ವಾಗತಾರ್ಹ

Dharwada - Basavaraj Idli

ಹುಬ್ಬಳ್ಳಿ: ಹಣಕಾಸು ಸಚಿವರು ಘೋಷಿಸಿದಂತೆ 1961ರ ಆದಾಯ ತೆರಿಗೆ ಕಾಯ್ದೆ ಪುನರ್ ಪರಿಷ್ಕರಣೆ, ಟಿಡಿಎಸ್ ಕಲಂಗಳ ಸರಳೀಕರಣ ಮತ್ತು ವ್ಯಾಜ್ಯಗಳು ಮತ್ತು ಅಪೀಲುಗಳ ನಿಯಮಗಳಲ್ಲಿ ಸರಳೀಕರಣ ಹಾಗೂ ಕರ ಜಾಲದ ವಿಸ್ತರಣೆ ಕ್ರಮಗಳು ಮಹತ್ವದ ವಿಷಯಗಳಾಗಿವೆ ಎಂದು ಕೇಂದ್ರ ಬಜೆಟ್ ಬಗ್ಗೆ ಲೆಕ್ಕಪರಿಶೋಧಕ ವೈ.ಎಂ.ಖಟಾವಕರ ಪ್ರತಿಕ್ರಿಯಿಸಿದ್ದಾರೆ.

ಇದೇ ರೀತಿ ದೀರ್ಘಾವಧಿ ಆಸ್ತಿಗಳ ಮಾರಾಟದ ಮೇಲಿನ ಕ್ಯಾಪಿಟಲ್ ಗೇನ್ ತೆರಿಗೆಯ ಶೇ. 20ರಿಂದ 12.5ಕ್ಕೆ ಇಳಿಸಿರುವುದು ಸ್ವಾಗತಾರ್ಹ.

ತೆರಿಗೆ ದರಗಳನ್ನು ಪರಿಷ್ಕರಿಸಲಾಗಿದ್ದು, 15 ಲಕ್ಷಗಳವರೆಗೆ ಅದಾಯ ಇರುವವರಿಗೆ 17,500 ರೂ. ವರೆಗೆ ತೆರಿಗೆ ಉಳಿತಾಯವಾಗುತ್ತದೆ. ಆದರೆ, ಕೌಟುಂಬಿಕ ಪಿಂಚಣಿದಾತರಿಗೆ ದೊರೆಯುತ್ತಿರುವ ವಿನಾಯಿತಿ ಸೌಲಭ್ಯವನ್ನು 15 ಸಾವಿರದಿಂದ 25ಸಾವಿರ ರೂ. ವರೆಗೆ ಏರಿಸಿರುವುದು ನಿರಾಶಾದಾಯಕ. ಇದು ಇನ್ನಷ್ಟು ಹೆಚ್ಚಾಗಬೇಕಿತ್ತು.

ಖಾಸಗಿ ವಲಯದ ನೌಕರರ ನೂತನ ಪಿಂಚಣಿ ಯೋಜನೆಗೆ ಸಲ್ಲಿಸುವ ವಂತಿಗೆ ಮಿತಿಯನ್ನು ವೇತನದ ಶೇ. 10ರ ಬದಲಾಗಿ ಶೇ. 14ಕ್ಕೆ ಏರಿಸಿರುವುದು ಅನುಕೂಲಕರ. ಇದರಿಂದ ವೇತನದಾರರು ತಮ್ಮ ನಿವೃತ್ತಿ ಜೀವನಕ್ಕೆ ಬೇಕಾಗುವ ಹೆಚ್ಚಿನ ಮೊತ್ತವನ್ನು ಪ್ರತಿ ತಿಂಗಳು ಕೂಡಿಸಲು ಸಹಾಯವಾಗುತ್ತದೆ.

ವಿಕಸಿತ ಭಾರತಕ್ಕಾಗಿ ಆದ್ಯತಾ ವಲಯಗಳನ್ನು ಗುರುತಿಸಿ ಅವುಗಳ ಅಭಿವದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿರುವುದು ಈ ಬಜೆಟ್ ನಲ್ಲಿ ಕಂಡು ಬರುತ್ತದೆ ಎಂದು ವೈ.ಎಂ. ಖಟಾವಕರ ಅಭಿಪ್ರಾಯ ಪಟ್ಟಿದ್ದಾರೆ.