ಕಲಘಟಗಿ: ವಕ್ಪ್ ಬೋರ್ಡ್ ಹೆಸರಲ್ಲಿ ಭಾರಿ ಅವ್ಯವಹಾರಗಳು ನಡೆದಿರುವ ಕಾರಣ ಕೇಂದ್ರ ಸರ್ಕಾರ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆ ಜಾರಿಗೆ ತರಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕಿನ ಉಗ್ನಿಕೇರಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ವಕ್ಪ್ ಬೋರ್ಡ್ 1995ರ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದು ಯಾವುದೇ ಸಮಾಜಕ್ಕೆ ನೋವು ಮಾಡುವ ಉದ್ದೇಶವಿಲ್ಲ. ವಕ್ಪ್ ಬೋರ್ಡ್ ಹೆಸರಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಈ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗುತ್ತಿದೆ ಎಂದರು.
ರಾಜ್ಯ ಸೇರಿ ದೇಶದ ವಿವಿಧೆಡೆ ವಕ್ಪ್ ಬೋರ್ಡ್ ಹೆಸರಲ್ಲಿ ದೊಡ್ಡ ಮಟ್ಟದ ಅವ್ಯವಹಾರಗಳು ನಡೆದಿವೆ. ಬೆಂಗಳೂರಿನ ವಿಲ್ಸನ್ ಮಾನರ್ ಹೋಟೆಲ್, ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಆಸ್ತಿಯೊಂದನ್ನು ವಕ್ಪ್ ಬೋರ್ಡ್ಗೆ ಸೇರಿಸಲಾಗಿದೆ. ಯಾವುದೇ ಒಂದು ಆಸ್ತಿ ಅವ್ಯವಹಾರದ ಮೂಲಕ ದುರುಪಯೋಗಕ್ಕೆ ಬಲಿಯಾಗಬಾರದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಕ್ಪ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದರು.
ವಕ್ಪ್ ಬೋರ್ಡ್ ಹೆಸರಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ಲಿಖಿತವಾಗಿ ಪತ್ರಗಳನ್ನು ಬರೆಯುವ ಮೂಲಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಬೇಕಿದೆ. ಅಲ್ಲದೆ, ವಕ್ಪ್ ಬೋರ್ಡ್ ಕಾಯ್ದೆಗೆ ಜನ ಬೆಂಬಲ ವ್ಯಕ್ತಪಡಿಸಬೇಕು ಎಂದರು.
ಇದೇ ವೇಳೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಿಜೆಪಿಯವರಿಗೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬ ಹೇಳಿಕೆಗೆ ಉತ್ತರಿಸಿದ ಜೋಶಿ, ಅಂತಹ ಅಸಂಬಂಧ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ ಎಂದರು.
ಮಾಜಿ ಎಂಎಲ್ಸಿ ನಾಗರಾಜ ಛಬ್ಬಿ ಮಾತನಾಡಿ, ದೇಶದ ಪ್ರಧಾನಿಗಳ ಬಗ್ಗೆ ಮಾತನಾಡುವ ಸಚಿವ ಸಂತೋಷ ಲಾಡ್, ತಮ್ಮದೇ ಕಾಂಗ್ರೆಸ್ ಸರ್ಕಾರವಿದ್ದರೂ ಕಲಘಟಗಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲು ಆಗುತ್ತಿಲ್ಲ. ಕ್ಷೇತ್ರ ಹಸಿರು ಬರಗಾಲ, ಅತಿವೃಷ್ಟಿಯಿಂದ ತತ್ತರಿಸಿದ್ದರೂ ಸಚಿವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ಇವುಗಳಿಂದ ನುಣುಚಿಕೊಳ್ಳಲು ಇಲ್ಲ-ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಲಾಡ್ ವಿರುದ್ಧ ಹರಿಹಾಯ್ದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಜಿಪಂ ಮಾಜಿ ಸದಸ್ಯ ಐ.ಸಿ. ಗೋಕುಲ, ಶಶಿಧರ ನಿಂಬಣ್ಣವರ, ಅಣ್ಣಪ್ಪ ಓಲೇಕಾರ, ಕಿರಣ ಪಾಟೀಲ, ಕುಲಕರ್ಣಿ, ಮದನ ಪಾಟೀಲಕುಲಕರ್ಣಿ, ರವಿ ಅಲ್ಲಾಪುರ ಇತರರಿದ್ದರು.