ಕೊಲ್ಹಾರ ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ತಹಸೀಲ್ದಾರ್ ಎಸ್.ಎಸ್. ನಾಯಕಲಮಠ ಧ್ವಜಾರೋಹಣ ನೆರವೇರಿಸಿದರು. ಎಫ್.ಎಚ್. ಪಠಾಣ, ವಿರೇಶ ಹಟ್ಟಿ ಇತರರಿದ್ದರು. 
ಜಿಲ್ಲೆ

ಕೊಲ್ಹಾರ ಸಂಪನ್ಮೂಲದ ಕೇಂದ್ರ

ಗಿರೀಶ ಸಗರ

ಕೊಲ್ಹಾರ: ಲಕ್ಷಾಂತರ ಸೇನಾನಿಗಳು ಮಾಡಿದ ಅವಿರತ ಹೋರಾಟ, ತ್ಯಾಗ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರೃ ದೊರಕಿದೆ. ಹೋರಾಟಗಾರರ ತ್ಯಾಗವನ್ನು ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಂಡು ದೇಶವನ್ನು ಸಮೃದ್ಧಿಯಡೆಗೆ ಒಯ್ಯಲು ಶ್ರಮಿಸಬೇಕು ಎಂದು ತಹಸೀಲ್ದಾರ್ ಎಸ್.ಎಸ್. ನಾಯಕಲಮಠ ಹೇಳಿದರು.

ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಲಕ್ಷಾಂತರ ಸ್ವಾತಂತ್ರೃ ಸೇನಾನಿಗಳ ತ್ಯಾಗ ಬಲಿದಾನವನ್ನು ಸದಾಕಾಲ ನೆನೆಯುವುದು ಅವಶ್ಯಕ ಎಂದರು.

ಕೆನೆ ಮೊಸರಿಗೆ ಪ್ರಸಿದ್ಧವಾಗಿರುವ ಕೊಲ್ಹಾರ ಪಟ್ಟಣ ಫಲವತ್ತಾದ ಭೂಮಿಗೂ ಸುಪ್ರಸಿದ್ಧ.

ಕರ್ನಾಟಕದ ಅತ್ಯಂತ ಉದ್ದ ಸೇತುವೆ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಮುಳವಾಡ ಕೈಗಾರಿಕಾ ಪ್ರದೇಶ ಹೀಗೆ ಸಂಪನ್ಮೂಲದ ಕೇಂದ್ರವಾಗಿರುವ ಕೊಲ್ಹಾರ ತಾಲೂಕಾ ಕೇಂದ್ರ ನಮ್ಮ ಹೆಮ್ಮೆಯ ಪ್ರತೀಕ ಎಂದರು.

ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸನ್ಮತಿ ತುಪ್ಪದ, ರೇಖಾ ಮನಗೂಳಿ, ದೀಪಾ ಹಳ್ಳಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವೇದಾ ಪತ್ತಾರ, ಲಕ್ಷ್ಮೀ ಬರಗಿ, ಪೂಜಾ ನರಸಲಗಿ, ಸಚಿನ ಸಿನ್ನೂರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ತಾಪಂ ಇಒ ಎಫ್.ಎಚ್. ಪಠಾಣ, ಪಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಕೃಷಿ ಅಧಿಕಾರಿ ಫಾತೀಮಾಬಾನು ಸುತಾರ, ಪಪಂ ಸದಸ್ಯರು ಹಾಗೂ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.