ಜಿಲ್ಲೆ

ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆಗೆ ಸ್ಪಂದಿಸಿ

ಎನ್.ವೆಂಕಟೇಶ್

ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳಿಗೆ ಲೋಕಾ ಎಸ್‌ಪಿ ಆಂಟೋನಿ ಜಾನ್ ಸೂಚನೆ

ಬಾಗೇಪಲ್ಲಿ: ತಾಲೂಕು ಮಟ್ಟದ ಅಧಿಕಾರಿಗಳಿಂದ ಹಿಡಿದು ಎಲ್ಲ ಹಂತದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮೂಲಸ್ಥಾನದಲ್ಲೇ ವಾಸವಿದ್ದು 24 ಗಂಟೆ ನಾಗರಿಕರ ಸಂಪರ್ಕದಲ್ಲಿದ್ದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಎಸ್‌ಪಿ ಆಂಟೋನಿ ಜಾನ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆಹವಾಲು ಸ್ವೀಕಾರ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ತಿಂಗಳಲ್ಲಿ ಒಂದು ಸಭೆ ನಡೆಸಲಾಗುತ್ತದೆ. ಆದರೆ, ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಹಾಗೂ ಹಣ ಕೇಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಧಿಕಾರಿಗಳು ನಾಗರಿಕರ ಕೆಲಸಗಳನ್ನು ಸಕಾಲಕ್ಕೆ ಮಾಡಿಕೊಡಬೇಕು ಎಂದು ಸೂಚಿಸಿದರು.

ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಮೋಹನ್, ಶಿವಪ್ರಸಾದ್, ತಹಸೀಲ್ದಾರ್ ಮನೀಷಾ ಪತ್ರಿ, ತಾಲೂಕು ಪಂಚಾಯಿತಿ ಇಒ ಕೆ.ವಿ.ರಮೇಶ್, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಸಹಾಯಕ ಕೃಷಿ ನಿರ್ದೇಶಕಿ ಎ.ಲಕ್ಷ್ಮೀ, ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಹಾಗೂ ಇತರ ಅಧಿಕಾರಿಗಳು, ಪಿಡಿಒಗಳು ಹಾಜರಿದ್ದರು.

21 ಅರ್ಜಿ ಸ್ವೀಕಾರ

ಸಭೆಯಲ್ಲಿ ತಹಸೀಲ್ದಾರ್ ಕಚೇರಿಗೆ ಸಂಬಂಧಿಸಿದಂತೆ 7 ಅರ್ಜಿಗಳು, ತಾಲೂಕು ಪಂಚಾಯತಿಗೆ ಸಂಬಂಧಿಸಿದ 6, ಭೂ ಮಾಪನಾ ಇಲಾಖೆಯ 1, ಪುರಸಭೆ ಕಾರ್ಯಾಲಯಕ್ಕೆ ಸಂಬಂಧಿಸಿ 6, ಪೊಲೀಸ್ ಠಾಣೆಗೆ ಸಂಬಂಧಿಸಿ 1 ಅರ್ಜಿ ಸೇರಿ ಒಟ್ಟು 21 ಅರ್ಜಿಗಳನ್ನು ಸ್ವೀಕರಿಸಲಾಯಿತು. 1 ಅರ್ಜಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಯಿತು. ತಾಲೂಕು ಭೂ ಮಾಪನಾ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ವಿಳಂಬ, ಗೃಹರಕ್ಷಕ ದಳ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಲಂಚದ ಆರೋಪ, ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ, ಇ-ಸ್ವತ್ತು ನೀಡುವಲ್ಲಿ ತಾರತಮ್ಯ, ನಿವೇಶನ ಮತ್ತು ಮನೆ ಖಾತೆ ಬದಲಾವಣೆಯಲ್ಲಿ ನಿರ್ಲಕ್ಷ್ಯ ಸೇರಿ ಹಲವು ಸಮಸ್ಯೆಗಳ ಬಗ್ಗೆ ನಾಗರಿಕರು ಅಹವಾಲು ಸಲ್ಲಿಸಿದರು.