ಜಿಲ್ಲೆ

ರಡ್ಡಿ ಸಹಕಾರ ಬ್ಯಾಂಕ್‌ನ ಶತಮಾನೋತ್ಸವ ಸಂಭ್ರಮ 13ರಂದು

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಗಾಂಽ ಚೌಕ್‌ನ ರಡ್ಡಿ ಸಹಕಾರ ಬ್ಯಾಂಕ್‌ನ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಅ. 13ರಂದು ಜರುಗಲಿದೆ. ಅಂದು ಸಂಜೆ 3.45ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ಮತ್ತು ಬ್ಯಾಂಕ್ ಸಂಸ್ಥಾಪಕರಾದ ಎಫ್.ಟಿ. ನಲವಡಿ ಹಾಗೂ ಸಹಕಾರ ರಂಗದ ಭೀಷ್ಮ ಕೆ.ಎಚ್. ಪಾಟೀಲರ ಪುತ್ಥಳಿಗಳನ್ನು ಅನಾವರಣ ಮಾಡುವರು. ಸಂಜೆ 4 ಗಂಟೆಗೆ ಸತ್ತೂರಿನ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ವೇದಿಕೆ ಕಾರ್ಯಕ್ರಮ ಜರುಗುವುದು. ಸಿಎಂ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶತಮಾನೋತ್ಸವ ಸಮಾರಂಭ ಉದ್ಘಾಟಿಸುವರು. ಎಲೆಹೊಸಳ್ಳಿ ಶ್ರೀ ಮಹಾಯೋಗಿ ವೇಮನ ಸಂಸ್ಥಾನಮಠದ ಶ್ರೀ ವೇಮನಾನಂದ ಮಹಾಸ್ವಾಮೀಜಿ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ `ಕೆ.ಎಚ್. ಪಾಟೀಲ ವಿಚಾರಧಾರೆ' ಪುಸ್ತಕ ಬಿಡುಗಡೆಗೊಳಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಹಾಯೋಗಿ ವೇಮನರ ಭಾವಚಿತ್ರ ಅನಾವರಣ ಮಾಡುವರು. ಕಾನೂನು ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಸಚಿವರು, ಶಾಸಕರು ಉಪಸ್ಥಿತರಿರುವರು ಎಂದು ಬ್ಯಾಂಕ್ ಅಧ್ಯಕ್ಷ ಕೆ.ಎಲ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.