ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ಭಾಗೀರಥಿ ಗುಡಿಯ ಶತಮಾನೋತ್ಸವ, ಜಯಂತಿ
ದೇವಾಂಶ ಸಂಭೂತರಾಗಿದ್ದ ಅದಮಾರು ಮಠದ ವಿಬುಧಪ್ರಿಯ ಶ್ರೀಗಳ ತಪೋಶಕ್ತಿಯಿಂದ ಉಡುಪಿಯ ಮಧ್ವ ಸರೋವರದಲ್ಲಿ ಗಂಗೆ ನೆಲೆಸುವಂತಾಗಿದೆ. ಗಂಗಾಪಾನ-ಗಂಗಾ ಸ್ನಾನ ಪುಣ್ಯದ ಕಾರ್ಯ. ದೇವಲೋಕ, ಭೂಲೋಕ ಹಾಗೂ ಪಾತಾಳ ಲೋಕಕ್ಕೆ ಸೇತುವೆಯಾಗಿ ಮೂರು ಲೋಕಗಳ ದರ್ಶನ ಮಾಡಿಸುತ್ತಾಳೆ. ಜೀವನದಲ್ಲಿ ಒಮ್ಮೆಯಾದರೂ ಗಂಗಾ ಸ್ನಾನ ಮಾಡಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಶ್ರೀಕೃಷ್ಣ ಮಠದ ಮಧ್ವ ಸರೋವರದ ತಟದಲ್ಲಿರುವ ಗಂಗಾ ಭಾಗೀರಥಿ ಗುಡಿಯ ಶತಮಾನೋತ್ಸವ ಹಾಗೂ ಗಂಗಾ ಜಯಂತಿ ಹಿನ್ನೆಲೆಯಲ್ಲಿ ಜೂನ್ 5ರಂದು ಬೆಳಗ್ಗೆ ಗಂಗಾ ಸ್ನಾನದ ಬಳಿಕ ಆಶೀರ್ವಚನ ನೀಡಿದರು.
ಶ್ರೀಕೃಷ್ಣನಿಗೆ ತೊಟ್ಟಿಲು ಸೇವೆ
ಶತಮಾನೋತ್ಸವದ ನಿಮಿತ್ತ ಸರೋವರದ ತಟದಲ್ಲಿ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀಕೃಷ್ಣನಿಗೆ ಅಷ್ಟಾವಧಾನ, ತೊಟ್ಟಿಲ ಸೇವೆ ನಡೆಯಿತು. ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ, ಇಂದಿನ ಶ್ರೀಕೃಷ್ಣನ ತೊಟ್ಟಿಲ ಸೇವೆಯು ಮಗಳ ಮನೆಗೆ ತಂದೆ ಬಂದಂತಾಗಿದೆ ಎಂದರು.
ಪುತ್ತಿಗೆ ಮಠದ ಪ್ರಧಾನ ಪುರೋಹಿತ ರಾಘವೇಂದ್ರ ಕೊಡಂಚ ನೇತೃತ್ವದಲ್ಲಿ ಕಳಶ ಪೂಜೆ ನಡೆಯಿತು. ಬಳಿಕ ಪುತ್ತಿಗೆ ಶ್ರೀಪಾದ ದ್ವಯರು ಮಧ್ವ ಸರೋವರಕ್ಕೆ ಕ್ಷೀರಾಭಿಷೇಕ, ಕಲಶಾಭಿಷೇಕದೊಂದಿಗೆ ಗಂಗಾ ಸ್ನಾನ ಮಾಡಿದರು.
ಮಠದ ವಿದ್ವಾಂಸ ಬಿ.ಗೋಪಾಲ ಆಚಾರ್ಯ, ಮಧ್ವ ಸರೋವರದಲ್ಲಿ ಗಂಗಾ ಸ್ನಾನದ ಮಹತ್ವ ತಿಳಿಸಿದರು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಕಾರ್ಯದರ್ಶಿ ರತೀಶ ತಂತ್ರಿ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಭಾಗೀರಥಿ ಗುಡಿಗೆ ಶತಮಾನದ ಇತಿಹಾಸ
ಸಪ್ತ ಮೋಕ್ಷ ಕ್ಷೇತ್ರಗಳಲ್ಲೊಂದಾದ ಉಡುಪಿ ಶ್ರೀಕೃಷ್ಣ ಮಠದಲ್ಲಿರುವ ಮಧ್ವ ಸರೋವರವು ಗಂಗಾ ಸಾನ್ನಿಧ್ಯಯುಕ್ತವಾಗಿದೆ. ಶ್ರೀಮದಾನಂದ ತೀರ್ಥ ಭಗವತ್ಪಾದರಿಂದ ಆಹೂತಳಾಗಿ ಗಂಗಾ ದೇವಿಯು ಇಲ್ಲಿಗೆ ಆಗಮಿಸಿದ್ದಾಳೆ. ಮಧ್ವಾಚಾರ್ಯರ ಅಪ್ರತಿಮ ತಪಸ್ಸಿನ ದ್ಯೋತಕವಾಗಿ 12 ವರ್ಷಕ್ಕೊಮ್ಮೆ ಮಧ್ವ ಸರೋವರದಲ್ಲಿ ಗಂಗೋದ್ಭವ ಆಗುತ್ತದೆ ಎನ್ನುವುದು ಅಪರೋಕ್ಷ ಜ್ಞಾನಿಗಳಿಂದ ಪ್ರತ್ಯಕ್ಷ ದೃಷ್ಟವಾದ ವಿಚಾರವಾಗಿದೆ. 1925ರಲ್ಲಿ ಅದಮಾರು ಮಠದ ವಿಬುಧಪ್ರಿಯ ತೀರ್ಥ ಶ್ರೀಪಾದರ ಪರ್ಯಾಯದ ಅವಧಿಯಲ್ಲಿ ಮಧ್ವ ಸರೋವರದಲ್ಲಿ ಗಂಗೋದ್ಭವದ ದಿವ್ಯ ಸಂಸ್ಮರಣೆಗಾಗಿ ಸರೋವರದ ತಟದಲ್ಲಿ ಗಂಗಾ ಭಾಗೀರಥಿ ಗುಡಿ ನಿರ್ಮಿಸಿದ್ದರು. ಆ ಗುಡಿಗೀಗ ಶತಮಾನ ತುಂಬಿದ ಹಿನ್ನೆಲೆಯಲ್ಲಿ ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀ ಉಪಸ್ಥಿತಿಯಲ್ಲಿ ಮಧ್ವ ಸರೋವರದಲ್ಲಿ ಸಂಕಲ್ಪ ಪೂರ್ವಕ ಧಾರ್ಮಿಕ ವಿಧಾನದೊಂದಿಗೆ ಗಂಗಾ ಸ್ನಾನ ನೆರವೇರಿತು.
ಗಂಗಾ ಸ್ನಾನದಿಂದ ಸರ್ವ ಸಂಕಷ್ಟ, ಅನೇಕ ಕಾಯಿಲೆಗಳೂ ದೂರವಾಗುತ್ತದೆ. ತನ್ನ ಕುಟುಂಬದ ಹಿರಿಯರಿಗೆ ಮುಕ್ತಿ ಕೊಡಿಸಲು ಭಗೀರಥ ಮಹಾರಾಜನ ತಪಸ್ಸಿನ ಫಲದಿಂದ ದೇವಲೋಕದಿಂದ ಗಂಗೆ ಭೂಲೋಕಕ್ಕೆ ಬಂದಿದ್ದಾಳೆ. ಅಂತಹ ಗಂಗೆಯ ದರ್ಶನದಿಂದ ಬದುಕಿನ ದುಗುಡ ನಿವಾರಣೆಯಾಗಿ, ಕುಟುಂಬಗಳಲ್ಲಿ ಬಾಂಧವ್ಯವೂ ಗಟ್ಟಿಯಾಗುತ್ತದೆ.
| ವಿಶ್ವಪ್ರಿಯ ತೀರ್ಥ ಶ್ರೀಪಾದರು. ಅದಮಾರು ಮಠ