ಜಿಲ್ಲೆ

ಸ್ಮಶಾನ ಕಾರ್ಮಿಕರನ್ನು ಇನ್ಮುಂದೆ ಸತ್ಯಹರಿಶ್ಚಂದ್ರ ಬಳಗವೆಂದು ಕರೆಯಿರಿ: ಸಿಎಂ ಬೊಮ್ಮಾಯಿ‌ ಹೊಸ ನಾಮಕರಣ

ಬೆಂಗಳೂರು: ಸ್ಮಶಾನ ಕಾರ್ಮಿಕರನ್ನು ಇನ್ನು ಮುಂದೆ ಸತ್ಯಹರಿಶ್ಚಂದ್ರ ಬಳಗವೆಂದು ಕರೆಯಿರಿ. ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬುಧವಾರ ಹೊಸದಾಗಿ ನಾಮಕರಣ ಮಾಡಿದರು.

ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಸ್ಮಶಾನ ಕಾರ್ಮಿಕರ ಜತೆಗೆ ಉಪಾಹಾರ ಸೇವಿಸುವ ಮುನ್ನ ಮಾತನಾಡಿದ ಅವರು, ಸತ್ತ ನಂತರ ಮುಕ್ತಿ ಕೊಡಿಸುವಂತಹ ಮಹತ್ತರ ಕಾರ್ಯವನ್ನು ಈ ಕೆಲಸಗಾರರು ನಿಭಾಯಿಸುತ್ತಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಹೌದು. ಘನತೆ-ಗೌರವದ ಬದುಕು ಕಟ್ಟಿಕೊಡಲೆಂದು ಅವರ ಸೇವೆ ಕಾಯಂಗೊಳಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 117 ಸ್ಮಶಾನ ಕಾರ್ಮಿಕರ ಸೇವೆ ಕಾಯಂ ಮಾಡಲಾಗಿದ್ದು, ಉಳಿದ 30 ಸಿಬ್ಬಂದಿ ಕುಟುಂಬಕ್ಕೆ ಅನುಕಂಪದ ಉದ್ಯೋಗ ನೀಡಲಾಗುವುದು. ರಾಜ್ಯದ ಉಳಿದೆಡೆ 300 ಸ್ಮಶಾನ ಕಾರ್ಮಿಕರಿದ್ದು, ಅವರನ್ನು ಹಂತ ಹಂತವಾಗಿ ಕಾಯಂ ಮಾಡಲಾಗುವುದು ಎಂದರು.

ರಾಜ್ಯದ 11,113 ಪೌರ ಕಾರ್ಮಿಕರನ್ನು ನೌಕರರು ಎಂದು ಪರಿಗಣಿಸಿದ್ದು, ಉಳಿದ 40 ಸಾವಿರ ಪೌರ ಕಾರ್ಮಿಕರನ್ನು ಎರಡು ಹಂತಗಳಲ್ಲಿ ಕಾಯಂ ಮಾಡಲಾಗುವುದು ಎಂಬ ಭರವಸೆ ನೀಡಿದರು.