ಮಂಡ್ಯ: ಮದ್ದೂರು ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಮಸ್ಥರು ಸಾರ್ವಜನಿಕ ಸ್ಮಶಾನಕ್ಕೆ ಜಾಗಕ್ಕಾಗಿ 2017ರಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ನ.21ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು, ಜಿಲ್ಲೆಯಲ್ಲಿ ಸ್ಮಶಾನದ ಸಮಸ್ಯೆ ಇಲ್ಲ ಎಂದು ಕೊಟ್ಟ ಮಾಹಿತಿ ಪ್ರಶ್ನೆ ಹುಟ್ಟುಹಾಕಿದೆ.
ಅಂದಿನ ಸಭೆಯಲ್ಲಿ ಸ್ಮಶಾನಕ್ಕೆ ಸಂಬಂಧಿಸಿದಂತೆ ವರದಿ ಮಂಡಿಸಿದ ಅಧಿಕಾರಿಗಳು, ಸ್ಮಶಾನದ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ ಎಂದಿದ್ದರು. ಆ ಸಮಯದಲ್ಲಿಯೇ ಶಾಸಕರು ಆಕ್ಷೇಪಿಸಿದ್ದರು. ಮಾತ್ರವಲ್ಲದೆ ಇಂದಿಗೂ ಕೆಲ ಗ್ರಾಮಗಳಲ್ಲಿ ಅಂತ್ಯಸಂಸ್ಕಾರ ಮಾಡಲು ಪರದಾಟವಿದೆ ಎಂದಿದ್ದರು. ಇದಕ್ಕೆ ಪೂರಕವೆನ್ನುವಂತೆ ಕೆ.ಶೆಟ್ಟಹಳ್ಳಿ ಗ್ರಾಮಸ್ಥರು, ಗುರುವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, ಗ್ರಾಮದ ಸರ್ವೆ ನಂಬರ್ 18ರಲ್ಲಿ ಸರ್ಕಾರಿ ಜಮೀನಿದೆ. ಇದನ್ನು ಹಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಇದರ ನಡುವೆಯೂ ಖಾಲಿ ಇರುವ ಜಮೀನಿನ ಪೈಕಿ 20 ರಿಂದ 30 ಗುಂಟೆ ಜಮೀನನ್ನು ಸ್ಮಶಾನಕ್ಕೆ ನೀಡುವಂತೆ ಮನವಿ ಮಾಡುತ್ತಲೇ ಇದ್ದೇವೆ. ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗಲೂ ಪತ್ರದೊಂದಿಗೆ ಕೇಳಿಕೊಂಡಿದ್ದೆವು. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಮನವಿ ಕೊಟ್ಟಿದ್ದೇವೆ. ಆದಾಗ್ಯೂ ಸ್ಪಂದಿಸುತ್ತಿಲ್ಲ ಎಂದರು.
ತೀವ್ರ ಒತ್ತಾಯ ಮಾಡಿದಾಗ ಸರ್ವೇ ಮಾಡುವುದಾಗಿ ಮದ್ದೂರು ತಹಸೀಲ್ದಾರ್ ಹೇಳುತ್ತಾರೆ. ಆದರೆ ಸರ್ವೇ ಮಾಡುವುದೇ ಇಲ್ಲ. ಬದಲಿಗೆ ದಿನಾಂಕ ಮುಂದೂಡುತ್ತಾರೆ. ಈ ವರ್ಷದ ಆರು ಬಾರಿ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ. ಹಲವು ವರ್ಷದಿಂದ ಇದೇ ಪರಿಪಾಠವಿದೆ. ಗ್ರಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಎಲ್ಲ ಸಮುದಾಯಕ್ಕೂ ಅನುಕೂಲವಾಗುವಂತೆ ಸ್ಮಶಾನಕ್ಕೆ ಜಾಗ ಕೊಡಬೇಕೆಂಬುದು ನಮ್ಮ ಆಗ್ರಹ. ಪ್ರಸ್ತುತ ಖಾಸಗಿ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.
ಮಾಜಿ ಸದಸ್ಯ ಮರಿಸ್ವಾಮಿಗೌಡ ಮಾತನಾಡಿ, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವುದಕ್ಕೆ ಸಾಕ್ಷಿಗಳನ್ನು ನೋಡಬಹುದು. ಸರ್ವೇ ಮಾಡಲು ಬೇಕಾದ ದಾಖಲೆಗಳನ್ನು ಕೊಟ್ಟಿದ್ದೇವೆ. ಆದರೆ ರಾಜಕೀಯದ ಒತ್ತಡದಿಂದಾಗಿ ಸ್ಮಶಾನಕ್ಕೆ ಜಾಗ ಸಿಗದಂತಾಗಿದೆ. ಇದು ನಮ್ಮ ಗ್ರಾಮದ ಸಮಸ್ಯೆಯಲ್ಲ. ಬದಲಿಗೆ ನಮ್ಮ ಗ್ರಾಪಂ ವ್ಯಾಪ್ತಿಯ ಯಾವುದೇ ಹಳ್ಳಿಯಲ್ಲಿಯೂ ಸ್ಮಶಾನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಹಾಲಿ ಸದಸ್ಯ ಸುಂದರೇಶ್ ಇದ್ದರು.