ತೆಲಸಂಗ: ರಕ್ತದಾನಿಗೆ ಮಾತ್ರ ಮರು ಜೀವ ಕೊಡುವ ಶಕ್ತಿ ಇದೆ. ಹಾಗಾಗಿ ದಾನಗಳಲ್ಲಿಯೇ ಶ್ರೇಷ್ಠವಾದ ರಕ್ತದಾನ ಮಾಡುವ ವ್ಯಕ್ತಿಯೂ ಜೀವ ಉಳಿಸುವ ದೇವರ ಸಾಲಿಗೆ ಸೇರಿಸಬಹುದು ಎಂದು ಪ್ರಾಚಾರ್ಯ ಡಾ. ಯು.ಎಲ್. ದೊಡ್ಡಮನಿ ಹೇಳಿದರು.
ಗ್ರಾಮದ ಎಸ್.ಎಂ.ವೈ.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುಥ್ ರೆಡ್ ಕ್ರಾಸ್ ಯುನಿಟ್ ವತಿಯಿಂದ ನಡೆದ ಸ್ವಯಂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿ, ರಕ್ತದಾನದಿಂದ ಕೇವಲ ರಕ್ತ ಅವಶ್ಯಕತೆ ಇರುವವರ ಜೀವ ಉಳಿಸುವುದು ಮಾತ್ರವಲ್ಲ.
ಕ್ತ ಕೊಡುವುದರಿಂದ ಹೊಸ ಜೀವಕೋಶಗಳ ಉತ್ಪತ್ತಿಗೆ ಸಹಕಾರಿಯಾಗುತ್ತದೆ. ರಕ್ತದಾನದ ಬಗ್ಗೆ ಸಾಕಷ್ಟು ಜನರಲ್ಲಿ ತಪ್ಪು ತಿಳುವಳಿಕೆಗಳಿವೆ. ಇದನ್ನು ಹೋಗಲಾಡಿಸಿ ಜನ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.
ಯುಥ್ ರೆಡ್ ಕ್ರಾಸ್ ಯುನಿಟ್ ಮುಖ್ಯಸ್ಥ ಪ್ರೊ. ಶಿವಾನಂದ ಹಾಲೊಳ್ಳಿ ಮಾತನಾಡಿ, ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ರಕ್ತದ ಬೇಡಿಕೆ ಹೆಚ್ಚುತ್ತಿದೆ. ರಕ್ತದ ಕೊರತೆಯಿಂದ ಸಾವಿರಕ್ಕೊಬ್ಬರು ಮೃತರಾಗುತ್ತಿದ್ದಾರೆ. ಇಂತಹ ತುರ್ತು ಸಂದರ್ಭವನ್ನು ಎದುರಿಸಲು ಯುವಕರ ಕೈನಿಂದ ಮಾತ್ರ ಸಾಧ್ಯ.
ನಾವು ಮಾಡುವ ಯಾವುದೇ ಕಾರ್ಯ ಉಪಯುಕ್ತವಾಗಿರಬೇಕು. ಆರೋಗ್ಯವಂತ ವ್ಯಕ್ತಿ ಪ್ರತಿ ಆರುತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ಸಂತೋಷ ದಂಡ್ಯಾಗೋಳ, ಡಾ. ವಾಸಂತಿ, ಡಾ. ಪ್ರತೀಕ, ಮಾದೇವಿ ಗುಳೇದಾರ, ಡಾ. ಶ್ರುತಿ, ಗೋದಾವರಿ ಪಾಟೀಲ, ವೈಶಾಲಿ, ಸುಜಾತಾ ದೀಕ್ಷಿತ, ಸಂಧ್ಯಾ, ಹನುಮಂತರಾಯ ಹಳವಾರ, ವಿನೋದ ಪಾಟೀಲ ಇತರರು ಇದ್ದರು.