ಜಿಲ್ಲೆ

ಆಟೋಟಗಳಲ್ಲಿ ವಿಶೇಷ ಮಕ್ಕಳ ಸಂಭ್ರಮ

ಮೈಸೂರು; ನಗರದ ನಜರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವಿಶೇಷ ಮಕ್ಕಳ ಕಲರವ ಕಳೆಗಟ್ಟಿತ್ತು.


ಸಾಮಾನ್ಯ ಮಕ್ಕಳಂತೆ ಈ ಅಸಾಮಾನ್ಯ ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟ ಸಾಕ್ಷಿಯಾಯಿತು. ವಿವಿಧ ಆಟದಲ್ಲಿ ಪಾಲ್ಗೊಂಡ ಈ ಚಿಣ್ಣರು ನಕ್ಕು ನಲಿದರು. ತಮ್ಮಂತೆ ಇರುವ ಇತರರೊಂದಿಗೆ ಬೆರೆತು ಸಂಭ್ರಮಿಸಿದರು. ಇದನ್ನು ಕಂಡ ಪಾಲಕರು ಭಾವುಕರಾದರು. ಇಂತಹ ವಿವಿಧ ಹೃದಯಸ್ಪರ್ಶಿ ಕ್ಷಣಗಳಿಗೆ ಈ ಕ್ರೀಡಾಕೂಟ ವೇದಿಕೆಯಾಯಿತು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಇಡೀ ದಿನ ವಿವಿಧ ಸ್ಪರ್ಧೆಗಳು ನಡೆದವು.


ಬುದ್ಧಿಮಾಂದ್ಯ ಮಕ್ಕಳ ವಿಭಾಗದಲ್ಲಿ ಓಟ ಸ್ಪರ್ಧೆ, ಚೆಂಡು ಎಸೆತ(ಟೆನಿಸ್ ಬಾಲ್), ಸಿ.ಪಿ.ಮಕ್ಕಳ ವಿಭಾಗದಲ್ಲಿ ಡಬ್ಬಕ್ಕೆ ಮಣಿ ಹಾಕುವ, ಚೆಂಡು ಎಸೆತ, ಆಟಿಸಂ ಮಕ್ಕಳ ವಿಭಾಗದಲ್ಲಿ ಡಬ್ಬಕ್ಕೆ ಮಣಿ ಹಾಕುವ, ಲೋಟಕ್ಕೆ ಮರಳು ತುಂಬುವ ಸ್ಪರ್ಧೆ ನಡೆಯಿತು.


ಕಿವುಡ ಮಕ್ಕಳ ವಿಭಾಗದಲ್ಲಿ ಕಪ್ಪೆ ಓಟ, 50, 100, 200 ಮೀಟರ್ ಓಟ, ಅಂಧ ಮಕ್ಕಳಿಗೆ ಮತ್ತು ಅಲ್ಪ ದೃಷ್ಟಿದೋಷ ಮಕ್ಕಳಿಗೆ ಕಪ್ಪೆ ಓಟ, ಉದ್ದ ಜಿಗಿತ, ಓಟ, ಗುಂಡು ಎಸೆತ( 8 ಪೌಂಡ್) ಸ್ಪರ್ಧೆ ಜರುಗಿತು.

ದೈಹಿಕ ಅಂಗವಿಕಲರಿಗೆ (ಒಂದು ಕಾಲ ಮತ್ತು ಎರಡು) 50 ಮೀಟರ್ ಓಟ, ಲೆಮನ್ ಆ್ಯಂಡ್ ಸ್ಪೂನ್, ಉದ್ದ ಜಿಗಿತ ಸ್ಪರ್ಧೆ ತುರುಸಿನಿಂದ ನಡೆಯಿತು. ದೈಹಿಕ ಅಂಗವಿಕಲರಿಗೆ ವ್ಹೀಲ್‌ಚೇರ್ ಓಟ ಗಮನ ಸೆಳೆಯಿತು. ವಯೋಮಾನಕ್ಕೆ ತಕ್ಕಂತೆ ಕೈಗೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಅಂಗವಿಕಲ ಬಾಲಕ, ಬಾಲಕಿಯರು ಪಾಲ್ಗೊಂಡು ಹಿರಿ ಹಿರಿ ಹಿಗ್ಗಿದರು.

ಅಂಗವಿಕಲ ಮಕ್ಕಳ ನಿರ್ವಹಣೆ ಸುಲಭವಲ್ಲ


ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅವರನ್ನು ನೋಡಿಕೊಳ್ಳಲು ಪ್ರೀತಿ ಹಾಗೂ ಬಹಳ ಬದ್ಧತೆ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. 25 ವರ್ಷಗಳಿಂದ ಸರ್ಕಾರ ಅಂಗವಿಕಲ ಮಕ್ಕಳ ಕ್ರೀಡಾಕೂಟವನ್ನು ನಡೆಸುತ್ತ ಬಂದಿದೆ. ಈ ಹಿಂದೆ ಕೆಲವು ಸಂಘ ಸಂಸ್ಥೆಗಳು ಇದನ್ನು ನಡೆಸುತ್ತಿದ್ದವು. ಈ ಕ್ರೀಡಾಕೂಟ ನಡೆಸಲು ಸರ್ಕಾರ ಪ್ರತಿ ಜಿಲ್ಲೆಗೂ 50 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದೆ. ಈ ಕ್ರೀಡಾಕೂಟ ಹಲವು ಬುದ್ಧಿಮಾಂದ್ಯ ಹಾಗೂ ಅಂಗವಿಕಲ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಇಂತಹ ಮಕ್ಕಳನ್ನು ಪ್ರೀತಿಸುವ ಹಾಗೂ ಕ್ರೀಡೆಯ ಮೂಲಕ ರಂಜಿಸುವ ಉತ್ತಮ ಕೆಲಸವಾಗಿದೆ ಎಂದರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕ್ರೀಡೆಯಲ್ಲಿ ಅಂಗವಿಕಲ ಮಕ್ಕಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ವಿಶೇಷ ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಸಾಬೀತುಪಡಿಸುವ ಕೆಲಸ ಈ ಕ್ರೀಡಾ ಸ್ಪರ್ಧೆಯಲ್ಲಿ ಆಗಲಿದೆ. ಸೋಲು ಗೆಲುವಿನ ಪ್ರಶ್ನೆ ಬೇಡ. ಅವಕಾಶಗಳು ಮುಂದೆ ಬರುತ್ತವೆ. ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ವಿ.ಜ್ಯೋತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಇತರರು ಭಾಗವಹಿಸಿದ್ದರು.