ಜಿಲ್ಲೆ

ಅ.೨೮ ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಮಡಿಕೇರಿ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.೨೮ ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಆಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಸೂಚಿಸಿದರು.


ಕಾರ್ಯಕ್ರಮ ಸಂಬಂಧ ನಗರದ ಜಿಲ್ಲಾಧಿಕಾರಿರವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ಆಯೋಜಿಸಬೇಕು. ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿ ಸೂಚಿಸಿದ ಅವರು, ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡುವ ಭಾಷಣಕಾರರನ್ನು ಆಹ್ವಾನಿಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪದವಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಬೇಕು. ಜತೆಗೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.


ಸಭೆಯ ಆರಂಭದಲ್ಲಿ ಮಾತನಾಡಿದ ಪ್ರಮುಖರಾದ ಕುಡಿಯರ ಮುತ್ತಪ್ಪ, ಪರಿಶಿಷ್ಟ ಪಂಗಡದಲ್ಲಿ ಹಲವು ಸಮಾಜಗಳಿದ್ದು, ವಾಲ್ಮೀಕಿ ಸಮಾಜದ ಜತೆ ಯರವ, ಕುಡಿಯ, ಮಲೆ ಕುಡಿಯ, ಸೋಲಿಗ, ಕಾಡುಕುರುಬ, ಜೇನುಕುರುಬ, ಬೆಟ್ಟ ಕುರುಬ ಹೀಗೆ ಹಲವು ಸಮಾಜಗಳಿದ್ದು, ಇತರ ಸಮಾಜದಲ್ಲಿ ದುಡಿದವರನ್ನು ಗುರುತಿಸಿ ಸನ್ಮಾನಿಸುವಂತಾಗಬೇಕು ಎಂದು ಸಲಹೆ ಮಾಡಿದರು.


ವಾಲ್ಮೀಕಿ ಸಮಾಜದ ಅಧ್ಯಕ್ಷ ಅಶೋಕ ಮಾತನಾಡಿ, ಕುಶಾಲನಗರದಲ್ಲಿ ೨೦೧೪ ರಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗಿದೆ. ಆದರೆ, ಈ ಭವನ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ವಾಲ್ಮೀಕಿ ಭವನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಅವರು ಸಭೆಯ ಗಮನಕ್ಕೆ ತಂದ ಅವರು, ಗಾಂಧಿ ಮಂಟಪದಿಂದ ಜನರಲ್ ತಿಮ್ಮಯ್ಯ ವೃತ್ತದ ಮಾರ್ಗ ಕಾವೇರಿ ಕಲಾಕ್ಷೇತ್ರದವರೆಗೆ ಮೆರವಣಿಗೆಗೆ ಅವಕಾಶ ಮಾಡಬೇಕು ಎಂದು ಕೋರಿದರು.


ಆದಿವಾಸಿ ಪ್ರಮುಖರಾದ ಸುಬ್ರಮಣಿ ಮಾತನಾಡಿ, ಆದಿವಾಸಿಗಳಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ಇಂದಿಗೂ ಸಹ ಹಾಡಿಯಲ್ಲಿ ವಾಸಿಸುವ ಆದಿವಾಸಿಗಳ ಬದುಕಿನ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು ಎಂದರು.


ಪ್ರಮುಖರಾದ ಗಂಗಾಧರ ಮಾತನಾಡಿ, ಕಳೆದ ಬಾರಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸುವಂತಾಗಬೇಕು. ಕಳೆದ ಬಾರಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಸನ್ಮಾನಕ್ಕೆ ಪರಿಗಣಿಸಿಲ್ಲ. ಮುಂದೆ ಈ ರೀತಿ ಆಗದಂತೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.


ಪ್ರಮುಖರಾದ ಮುತ್ತಮ್ಮ ಮಾತನಾಡಿ, ಗಿರಿಜನ ಆಶ್ರಮ ಶಾಲೆಗಳಲ್ಲಿ ಜೇನುಕುರುಬ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗಿರಿಜನ ಆಶ್ರಮ ಶಾಲೆ ಹೆಸರು ಬದಲಿಗೆ ವಾಲ್ಮೀಕಿ ಆಶ್ರಮ ಶಾಲೆ ಎಂದು ಹೆಸರು ಬದಲಿಸುವುದು ಸರಿಯಲ್ಲ. ಈ ಹಿಂದಿನಂತೆಯೇ ಗಿರಿಜನ ಆಶ್ರಮ ಶಾಲೆ ಎಂದು ಇರಬೇಕು ಎಂದು ಅವರು ಸಲಹೆ ಮಾಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಸರ್ಕಾರವು ಕಾಲ ಕಾಲಕ್ಕೆ ಹೊರಡಿಸುವ ನಿರ್ದೇಶನವನ್ನು ಪಾಲಿಸುವುದು ಅಧಿಕಾರಿಗಳ ಕೆಲಸವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.


ಸಂಗೊಳ್ಳಿ ರಾಯಣ್ಣ ವೇದಿಕೆಯ ಜಿಲ್ಲಾಧ್ಯಕ್ಷ ಪ್ರಭಾಕರ, ಲ್ಯಾಂಪ್ ಸೊಸೈಟಿ ಪ್ರಮುಖರಾದ ಅನಿಲ್ ರಾವ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ಪೌರಾಯುಕ್ತ ವಿಜಯ್, ಶಿಕ್ಷಣಾಧಿಕಾರಿ ಮಹದೇವಸ್ವಾಮಿ, ಜಿ.ಪಂ.ಎಂಜಿನಿಯರ್ ಸುರೇಶ್ ಕುಮಾರ್, ಮುತ್ತುರಾಜು, ಇತರರು ಇದ್ದರು.