ಜಿಲ್ಲೆ

ಜಿಲ್ಲೆಯಲ್ಲಿ ಸಂಭ್ರಮದ ಈದ್‌ಮಿಲಾದ್ ಆಚರಣೆ

ಆದರ್ಶ್. ಎಂ.ಕೆ.

ಮಡಿಕೇರಿ: ಪ್ರವಾದಿ ಮಹಮದ್ ಪೈಗಂಬರರ ಜನ್ಮ ದಿನಾಚರಣೆಯನ್ನು ಮುಸ್ಲಿಂ ಬಾಂಧವರು ಸೋಮವಾರ ಜಿಲ್ಲೆಯಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು.


ಸೋಮವಾರ ಬೆಳಗ್ಗೆ ಮುಸ್ಲಿಂ ಬಾಂಧವರು ಮಹಮ್ಮದ್ ಪೈಗಂಬರರ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ನಂತರ ಮಸೀದಿಗಳಿಗೆ ತೆರಳಿದ ಮುಸ್ಲಿಂ ಬಾಂಧವರು, ಸುಖ, ಶಾಂತಿ, ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಪ್ರಯುಕ್ತ ಮಸೀದಿಗಳಲ್ಲಿ ವಿಶೇಷ ಪ್ರವಚನಗಳು ನಡೆದವು. ಈದ್ ಮಿಲಾದ್ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂಬಾಂಧವರ ಧ್ವಜಗಳು ರಾರಾಜಿಸುತ್ತಿದ್ದ ಚಿತ್ರಣ ಕಂಡುಬಂತು.


ಬದ್ರಿಯಾ ಮಸೀದಿಯಲ್ಲಿ ಸಂಭ್ರಮ: ಮಡಿಕೇರಿಯ ಬದ್ರಿಯಾ ಮಸೀದಿಯಲ್ಲಿ ಈದ್ ಮಿಲಾದ್ ಸಂಭ್ರಮ ಮನೆ ಮಾಡಿತು.


ಬದ್ರಿಯಾ ಮಸೀದಿ ಆಡಳಿತ ಮಂಡಳಿ ಏರ್ಪಡಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಧರ್ಮಗುರು ಖಾದರ್ ಬಾಖವಿ ಪಾಲ್ಗೊಂಡು ಮಾತನಾಡಿ, ಪ್ರವಾದಿಯನ್ನು ಎಲ್ಲಿಯವರೆಗೆ ಯಾರು ಪ್ರೀತಿಸುವುದಿಲ್ಲವೋ ಅಲ್ಲಿಯವರೆ ನೈಜ ವಿಶ್ವಾಸಿಯಾಗಲು ಸಾಧ್ಯವಿಲ್ಲ ಎಂದ ಅವರು, ಅಮ್ಮನ ಕಾಲಡಿಯಲ್ಲಿ ಸ್ವರ್ಗವಿದೆ ಎಂದು ಕಲಿಸಿದ ಪ್ರವಾದಿ ರವರ ಮಾರ್ಗವನ್ನು ನಾವು ಪಾಲಿಸಬೇಕು. ಅಲ್ಲದೇ, ವಯಸ್ಸಾದ ತಂದೆ ತಾಯಿಯನ್ನು ಕಡೆಗಣಿಸಲಾಗುತ್ತಿರುವುದು ಬಹು ದೊಡ್ಡ ದುರಂತವಾಗಿದೆ. ಯುವ ಜನರು ತಮ್ಮ ಹೊಣೆಗಾರಿಕೆಯನ್ನು ಅರಿತು ಮುನ್ನಡೆಯ ಬೇಕು ಎಂದರು.