ಜಿಲ್ಲೆ

ಗುಂಡ್ಲುಪೇಟೆ ಪಟ್ಟಣದಲ್ಲಿ ಸಂಭ್ರಮ

ನಾಗೇಶ ಎಸ್

ಗುಂಡ್ಲುಪೇಟೆ: ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಪಟ್ಟಣದ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.

ಐತಿಹಾಸಿಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಹಿಂದು ಸಂಘಟನೆಗಳ ಕಾರ್ಯಕರ್ತರು ನಿರ್ಧರಿಸಿದ್ದರಿಂದ ಬೀದಿಬದಿಯ ವಿದ್ಯುತ್ ಕಂಬಗಳಿಗೆ ಕೇಸರಿ ಬಾವುಟ ಹಾಗೂ ಬಂಟಿಂಗ್ಸ್ ಕಟ್ಟಿ ಪಟ್ಟಣವನ್ನು ಕೇಸರಿಮಯ ಮಾಡಿದ್ದರು. 39 ಮುಜರಾಯಿ ದೇವಾಲಯಗಳು, ಪಟ್ಟಣದ ಶ್ರೀ ಕೋಟೆ ಕೋದಂಡರಾಮ, ರಾಮೇಶ್ವರ, ಬ್ರಾಹ್ಮಣರ ರಾಮಮಂದಿರ, ಬಣಜಿಗ ಹಾಗೂ ನಾಯಕರ ಬೀದಿಗಳ ರಾಮಮಂದಿರ, ಶಕ್ತಿಶಾಲಿ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಿ, ಪ್ರಸಾದ ವಿನಿಯೋಗ ಮಾಡಲಾಯಿತು.

ಕಿತ್ತೂರು ರಾಣಿ ಚನ್ನಮ್ಮ ರಸ್ತೆಯ ರಾಮೇಶ್ವರ ದೇವಾಲಯದ ಮುಂಭಾಗ ಎಲ್‌ಇಡಿ ಪರದೆಯಲ್ಲಿ ಅಯೋಧ್ಯೆ ಕಾರ್ಯಕ್ರಮವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ರಾಮೇಶ್ವರ ದೇವಾಲಯದಲ್ಲಿ ರಾಜಸ್ಥಾನಿ ಸಮಾಜದಿಂದ ಭಕ್ತರಿಗೆ ಲಾಡು ವಿತರಿಸಲಾಯಿತು. ಬ್ರಾಹ್ಮಣರ ರಾಮಮಂದಿರದಲ್ಲಿ ಶ್ರೀರಾಮ ತಾರಕ ಹೋಮ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ಬಂಗಾರಶೆಟ್ಟರ ಕುಟುಂಬದವರು ಹುಳಿಯನ್ನ, ಮೊಸರನ್ನ, ಪಾನಕ, ಮಜ್ಜಿಗೆ ವಿತರಣೆ ಮಾಡಿದರು.

ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲೇಶ್ ನೇತೃತ್ವದಲ್ಲಿ ನಾಯಕರ ಬೀದಿಯ ಶ್ರೀವಾಲ್ಮೀಕಿ ರಾಮಮಂದಿರದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್ ನೇತೃತ್ವದಲ್ಲಿ ಶಕ್ತಿಶಾಲಿ ಆಂಜನೇಯ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ, ಬೃಹತ್ ಹಾರಗಳಿಂದ ಪುಷ್ಪಾಲಂಕಾರ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು.