ಹಿರೀಸಾವೆ: ಪಟ್ಟಣದ ಶ್ರೀ ಹೆಬ್ಬಾರಮ್ಮನ ದೇಗುಲಕ್ಕೆ ಭಕ್ತರು ಪೂಜೆ ಸಲ್ಲಿಸಿ ಬಾಗಿಲು ತೆರೆಯುವ ಮೂಲಕ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ಹಬ್ಬಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಹಿರೀಸಾವೆ ಮತ್ತು ಹೊನ್ನೇನಹಳ್ಳಿ ಗ್ರಾಮದಲ್ಲಿ 15 ದಿನ ಸಂಭ್ರಮದಿಂದ ಉತ್ಸವ ಆಚರಿಸಲಾಗುತ್ತದೆ. ಮಂಗಳವಾರ ರಾತ್ರಿ ಉಯ್ಯಲೆ ಕಂಬಕ್ಕೆ ಬಾಳೆ ಕಂದನ್ನು ಕಟ್ಟುವ ಮೂಲಕ ಹಬ್ಬದ ಧಾರ್ಮಿಕ ವಿಧಾನಗಳನ್ನು ಗ್ರಾಮದಲ್ಲಿ ಅನುಸರಿಸಲಾಗುತ್ತದೆ.
ಪ್ರತಿ ದಿನ ರಾತ್ರಿ ದೇವಿಯ ಮೆರವಣಿಗೆ, ಜನಪದ ಶೈಲಿಯ ರಂಗದ ಕುಣಿತ ನಡೆಸಲಾಗುತ್ತದೆ. ಗ್ರಾಮದಲ್ಲಿ ಹಬ್ಬಕ್ಕೆ ಚಾಲನೆ ದೊರಕಿದ ದಿನದಿಂದ ದೇವರಿಗೆ ಕಂಕಣ ಕಟ್ಟಿದ ಬಳಿಕ ದೇವಿಯ ಮನೆತನದವರು ತಮ್ಮ ಮನೆಗಳಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳನ್ನು ಮಾಡುವುದಿಲ್ಲ. ಇದು ಪೂರ್ವ ಕಾಲದಿಂದ ನಡೆದು ಬಂದಿರುವ ಸಂಪ್ರದಾಯವಾಗಿದೆ.
ಯುಗಾದಿ ನಂತರ ಏಪ್ರಿಲ್ ತಿಂಗಳಲ್ಲಿ ಈ ಹಬ್ಬ ನಡೆಯಬೇಕಿತ್ತು. ನೂತನ ರಥ ನಿರ್ಮಾಣದ ಕಾರ್ಯದ ಹಿನ್ನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆ. ಜೂ.11ರ ಮಂಗಳವಾರ ಹೆಬ್ಬಾರಮ್ಮ ದೇವಿಯ ಮಡೆ ಹಬ್ಬ, ಜೂ.12ರ ಬುಧವಾರ ಚೌಡೇಶ್ವರಿ ದೇವಿಯ ಬ್ರಹ್ಮ ರಥೋತ್ಸವ ಜರುಗಲಿದೆ.
ನಾಲ್ಕು ಬಾರಿ ದರ್ಶನ: ಶ್ರೀ ಚೌಡೇಶ್ವರಿ ದೇವಿಯ ಸಹೋದರಿ ಶ್ರೀ ಹೆಬ್ಬಾರಮ್ಮನ ದರ್ಶನ ಭಕ್ತರಿಗೆ ವರ್ಷದಲ್ಲಿ ನಾಲ್ಕು ಸಲ ಮಾತ್ರ ಲಭ್ಯವಾಗಲಿದೆ. ಪ್ರಥಮವಾಗಿ ಬಾಳೆ ಕಂಬ ತರುವ ಮಂಗಳವಾರ ರಾತ್ರಿ, ಎರಡನೇ ಸಲ ಶನಿವಾರ ಮಧ್ಯಾಹ್ನ ಮಡಿಲಕ್ಕಿ ಸಂಗ್ರಹಕ್ಕೆ ಬಂದಾಗ ಹಾಗೂ ಮಡೆ ಹಬ್ಬದ ದಿನದಂದು ಮೂರನೇ ಬಾರಿ ಹಾಗೂ ಚೌಡೇಶ್ವರಿ ದೇವಿಯ ರಥೋತ್ಸವದ ದಿನದ ಮಧ್ಯಾಹ್ನ ನಾಲ್ಕನೇ ಬಾರಿ ದೇವಿಯ ದರ್ಶನ ಭಕ್ತರಿಗೆ ಸಿಗುತ್ತದೆ. ಹಬ್ಬ ಮುಗಿದ ನಂತರ ದೇವಸ್ಥಾನದ ಬಾಗಿಲು ಹಾಕಿದರೆ ಮುಂದಿನ ವರ್ಷದ ಹಬ್ಬಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.