ಬಾಳೆಹೊನ್ನೂರು: ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣ ಐತಿಹಾಸಿಕ ಕ್ಷಣ ಎಂದು ಬಿಜೆಪಿ ತಾಲೂಕು ವಕ್ತಾರ ಬಿ.ಜಗದೀಶ್ಚಂದ್ರ ಬಣ್ಣಿಸಿದರು.
ಪ್ರಧಾನಿಯಾಗಿ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಜೇಸಿ ವೃತ್ತದಲ್ಲಿ ಭಾನುವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಸತತವಾಗಿ ಮೂರನೇ ಬಾರಿ ದೇಶದ ಪ್ರಧಾನಿ ಗದ್ದುಗೆ ಏರುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ನರೇಂದ್ರ ಮೋದಿ ಅವರಂತಹ ವಿಶ್ವ ನಾಯಕರಿಂದ ಮಾತ್ರ ಇದು ಸಾಧ್ಯ. ನರೇಂದ್ರ ಮೋದಿ ಅವರು ಜನಸಾಮಾನ್ಯರ ದನಿಯಾಗಿರುವ ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಲು ಕಾರಣವಾಗಿದೆ ಎಂದರು.
ದೇಶದಲ್ಲಿ ಇದೀಗ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮಿತ್ರಕೂಟದ ಶಕೆ ಆರಂಭವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ. ದೇಶ ಇನ್ನೂ ಉಚ್ಚ್ರಾಯ ಸ್ಥಿತಿಗೆ ತಲುಪಲಿದೆ. ಮೋದಿ ಅವರ ನೂತನ ಸಚಿವ ಸಂಪುಟ ಬಲಿಷ್ಠವಾಗಿದೆ. ದೇಶದ ಸಮಗ್ರತೆ, ಏಕತೆಗಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ದನಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.
ಈ ಬಾರಿ ಮೋದಿ ಅವರ ಸಂಪುಟದಲ್ಲಿ ರಾಜ್ಯಕ್ಕೆ ಸಿಂಹಪಾಲು ದೊರೆತಿದೆ. ನೂತನ ಸಚಿವರೆಲ್ಲರೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಭರವಸೆಯಿದೆ. ದೇಶದ ತಳ ಸಮುದಾಯಕ್ಕೂ ಸಹ ಎನ್‌ಡಿಎ ಮಿತ್ರಕೂಟದ ಸರ್ಕಾರದಿಂದ ಎಲ್ಲ ಸವಲತ್ತುಗಳು ಹಿಂದಿನಂತೆ ಮುಂದುವರೆಯಲಿದೆ ಎಂದರು.
ಬಿ.ಕಣಬೂರು ಗ್ರಾಪಂ ಸದಸ್ಯರಾದ ಕೋಕಿಲಮ್ಮ, ಅಶ್ರಫ್, ಬಿಜೆಪಿ ಯುವ ಮುಖಂಡರಾದ ರಕ್ಷಿತ್ ಸಮುತ್ಕರ್ಷ, ಯೋಗೇಶ್ ಆಚಾರ್ಯ, ಪ್ರಶಾಂತ್ ಪೂಜಾರಿ, ಅರುಣ್ ಆಚಾರ್ಯ, ರಾಘವೇಂದ್ರ, ಸುಧಾಕರ್ ಪೂಜಾರಿ, ಪರಮೇಶ್ ಇತರರಿದ್ದರು.
ಪಟ್ಟಣದ ಜೇಸಿ ವೃತ್ತದಲ್ಲಿ ನಾಸಿಕ್ ಡೋಲು ಬಾರಿಸಿ ಕುಣಿದು ಕುಪ್ಪಳಿಸಿದ ಬಿಜೆಪಿ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಾಟುಕೊಡಿಗೆ, ಮಸೀದಿಕೆರೆ, ರಂಭಾಪುರಿ ಮಠ, ಮೆಣಸುಕೊಡಿಗೆ, ಸೋಮೇಶ್ವರ ನಗರ, ಬಸವನಕಟ್ಟೆ ಮುಂತಾದ ಕಡೆಗಳಲ್ಲಿಯೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.