ಮೈಸೂರು: ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದಂತೆಯೇ ಗ್ರಾಮದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು… ಕಾಂಗ್ರೆಸ್ ಹೈಕಮಾಂಡ್ ಮುಂದಿನ ಮುಖ್ಯಮಂತ್ರಿಯ ಹೆಸರು ಪ್ರಕಟಿಸುತ್ತಿದ್ದಂತೆಯೇ ಊರಿನಲ್ಲಿ ಸಂಭ್ರಮ ಮನೆಮಾಡಿತ್ತು… ಗ್ರಾಮಸ್ಥರು ಬೀದಿಗಳಲ್ಲಿ ಸಡಗರದಿಂದ ಓಡಾಡುತ್ತ ಪರಸ್ಪರ ಸಂತಸ ಹಂಚಿಕೊಂಡರು… ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತೆರಳಲು ಆಗಬೇಕಾದ ಸಿದ್ಧತೆ ಕುರಿತು ಎಲ್ಲರೂ ಚರ್ಚೆಯಲ್ಲಿ ತೊಡಗಿದ್ದರು…
ಮೈಸೂರು ತಾಲೂಕು ವರುಣ ಹೋಬಳಿಗೆ ಸೇರಿದ ಸಿದ್ದರಾಮನಹುಂಡಿಯಲ್ಲಿ ಗುರುವಾರ ಕಂಡುಬಂದ ಸನ್ನಿವೇಶ ಮತ್ತು ದೃಶ್ಯಗಳಿವು. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ. ಸಿದ್ದರಾಮಯ್ಯ ಈಗಲೂ ಈ ಊರಿನ ಮತದಾರ.
ಗ್ರಾಮದಲ್ಲಿ ಸಿದ್ದರಾಮಯ್ಯ ಆಪ್ತರು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ವೀರಮಕ್ಕಳ ಕುಣಿತ ತಂಡದ ಸದಸ್ಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಕೆಲ ಅಭಿಮಾನಿಗಳು, ಸಿದ್ದರಾಮಯ್ಯ ಅವರ ಭಾವಚಿತ್ರ, ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಜಯಘೋಷ ಕೂಗಿದರು.
ಸಿದ್ದರಾಮಯ್ಯ ಅವರ ಮೂವರು ಸಹೋದರರ ಪೈಕಿ ಹಿರಿಯಣ್ಣ ತಮ್ಮಯ್ಯ, ಕಿರಿಯ ಸಹೋದರ ರಾಮೇಗೌಡ ನಿಧನರಾಗಿದ್ದಾರೆ. ಮತ್ತೊಬ್ಬ ತಮ್ಮ ಸಿದ್ದೇಗೌಡ, ದಿವಂಗತ ತಮ್ಮಯ್ಯ ಮತ್ತು ರಾಮೇಗೌಡ ಅವರ ಕುಟುಂಬಗಳು ಸಿದ್ದರಾಮನಹುಂಡಿಯಲ್ಲೇ ಪ್ರತ್ಯೇಕ ಮನೆಗಳಲ್ಲಿ ವಾಸವಾಗಿವೆ.
ಹುಟ್ಟೂರಿನ ಮೇಲೆ ಸಿದ್ದರಾಮಯ್ಯ ಅವರಿಗೆ ಎಲ್ಲಿಲ್ಲದ ಪ್ರೇಮ. ಆದ್ದರಿಂದ ರಾಜಕೀಯವಾಗಿ ಅವರು ಎಷ್ಟೇ ಎತ್ತರಕ್ಕೆ ಏರಿದ್ದರೂ ಊರಿನ ಜತೆ ನಿಕಟಸಂಪರ್ಕ, ಸಂಬಂಧ ಹೊಂದಿದ್ದಾರೆ. ಈಗಲೂ ಊರಿನ ಅವರ ಮನೆಯ ಮುಂದೆ ‘ಸಿದ್ದರಾಮಯ್ಯ’ ಎಂಬ ನಾಮಫಲಕ ಹಾಗೆಯೇ ಇದೆ. ಹಬ್ಬ-ಹರಿದಿನಗಳಿಗೆ ಸಿದ್ದರಾಮಯ್ಯ ಊರಿಗೆ ಆಗಮಿಸುತ್ತಾರೆ. ಪ್ರತಿ ಬಾರಿ ನಡೆಯುವ ಜಾತ್ರೆಯಲ್ಲಿ ಭಾಗವಹಿಸಿ, ಸಾಂಪ್ರದಾಯಿಕ ವೀರಮಕ್ಕಳ ಕುಣಿತದಲ್ಲಿ ತಂಡದೊಂದಿಗೆ ಸ್ವತಃ ಹೆಜ್ಜೆ ಹಾಕುತ್ತಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ತಮ್ಮ ರಾಜಕೀಯ ಅಧಿಕಾರ ಮತ್ತು ಪ್ರಭಾವ ಬಳಸಿಕೊಂಡು ಸರ್ಕಾರದಿಂದ ಊರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಆದ್ದರಿಂದಲೇ ಗ್ರಾಮಸ್ಥರಿಗೂ ಸಿದ್ದರಾಮಯ್ಯ ಎಂದರೆ ಪ್ರೀತಿ, ಅಭಿಮಾನ ಮತ್ತು ಗೌರವ.
‘2018ರಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರಿಗೆ ಆಗಲೇ 2ನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ದೊರಕಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಬಹುಮತದಿಂದ ದೂರ ಉಳಿಯಿತು. ಹಾಗಾಗಿ, ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾಗಿದ್ದರು. ಆದರೆ ಈ ಬಾರಿ ಜನರು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ 2ನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಟ್ಟಿದ್ದರಿಂದ ಜನರು ನೆಮ್ಮದಿಯಾಗಿ ಊಟ ಮಾಡುವಂತಾಯಿತು. ಈ ಸಲ ಮುಖ್ಯಮಂತ್ರಿಯಾಗಿ ಅವರ ಭರವಸೆಯಂತೆ ಅಕ್ಕಿ ಪ್ರಮಾಣ ಹೆಚ್ಚಿಸಿ 10 ಕೆ.ಜಿ. ಕೊಡುತ್ತಾರೆ. ಆ ಮೂಲಕ ಬಡವರ್ಗದ ಜನರಿಗೆ ತುಂಬ ಅನುಕೂಲವಾಗಲಿದೆ. ಹಿಂದೆ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅಕ್ಕಿ ಕೊಟ್ಟಿದ್ದರಿಂದ ಎಷ್ಟೋ ಜನರು ಅನ್ನ ಊಟ ಮಾಡುವಂತಾಯಿತು. ನಮ್ಮೂರಿಗೆ ಶಾಲೆ, ಆಸ್ಪತ್ರೆ, ಕಾಲೇಜು ಎಲ್ಲವನ್ನೂ ಕೊಟ್ಟಿದ್ದಾರೆ. ಈಗ 10 ಕೆ.ಜಿ. ಅಕ್ಕಿ, ಮನೆ ಯಜಮಾನಿಗೆ 2 ಸಾವಿರ ರೂ. ಕೊಡುತ್ತೇನೆ ಎಂದಿದ್ದು, ಹೇಳಿದಂತೆ ಮಾಡುತ್ತಾರೆ. ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಿರುವುದು ಖುಷಿಯ ವಿಷಯ’ ಎಂಬುದು ಸಿದ್ದರಾಮಯ್ಯ ಅವರ ಸಹೋದರ, ಸಂಬಂಧಿಕರು ಮತ್ತು ಗ್ರಾಮಸ್ಥರ ಒಮ್ಮತದ ಅಭಿಪ್ರಾಯ.
‘ಸಿದ್ದರಾಮೇಶ್ವರ ಸಿದ್ದರಾಮಯ್ಯ ಅವರ ಮನೆದೇವರು. ಅಲ್ಲದೆ, ಗ್ರಾಮದೇವತೆಯೂ ಹೌದು. ಆದ್ದರಿಂದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ನಂದಿಕಂಬ, ಸತ್ತಿಗೆ-ಸೂರಪಾಣಿ ಮತ್ತು ದೇವರ ಸಮೇತ ಬೆಂಗಳೂರಿಗೆ ತೆರಳುತ್ತೇವೆ’ ಎಂದು ಗ್ರಾಮಸ್ಥರು ಸಂಭ್ರಮ ಹಂಚಿಕೊಂಡರು.
‘ನಮ್ಮೂರಿನ ಮಗ ಮತ್ತೆ ಮುಖ್ಯಮಂತ್ರಿ ಆಗುವುದನ್ನು ಕಣ್ತುಂಬಿಕೊಳ್ಳುವುದು ನಮ್ಮೆಲ್ಲರ ಬಹುದಿನಗಳ ಕನಸು. ಆದ್ದರಿಂದ ನಾವೆಲ್ಲರೂ ಕುಟುಂಬ ಸಮೇತ ಬೆಂಗಳೂರಿಗೆ ತೆರಳುತ್ತೇವೆ’ ಎಂದು ಸಿದ್ದರಾಮಯ್ಯ ಅವರ ಅಭಿಮಾನಿ ಚಿಕ್ಕಸ್ವಾಮಿ ತಿಳಿಸಿದರು.