ವಿಜಯಪುರ ತಾಲೂಕಿನ ಅರಕೇರಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ‘ವಿಶ್ವ ಆಯೋಡಿನ್ ಕೊರತೆ ದಿನ-ಸಪ್ತಾಹ’ದಲ್ಲಿ ಕರಪತ್ರ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಡಾ. ಸುರೇಶ ಪಾಶಾಪೂರ, ಬಿ.ಪಿ. ಜಕ್ಕನ್ನಗೌಡ್ರ ಮತ್ತಿತರರಿದ್ದಾರೆ.  
ಜಿಲ್ಲೆ

ವಿಶ್ವ ಆಯೋಡಿನ್ ಕೊರತೆ ನಿಯಂತ್ರಣ ದಿನ ಆಚರಣೆ

Vijyapura - Parsuram Bhasagi

ವಿಜಯಪುರ: ಆಯೋಡಿನ್ ನಮ್ಮ ದೇಹಕ್ಕೆ ಬೇಕಾದ ಒಂದು ಸೂಕ್ಷ್ಮ ಪೋಷಕಾಂಶ. ನಮ್ಮ ದಿನ ನಿತ್ಯದ ಆಹಾರದಿಂದ ನಮಗೆ ಆಯೋಡಿನ್ ಸಿಗಲಿದೆ. ಹೀಗಾಗಿ ಹೆಚ್ಚು ಹೆಚ್ಚು ಪೋಷಕಾಂಶಯುಕ್ತ ಆಹಾರ ಸೇವಿಸಬೇಕೆಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಹೇಳಿದರು.

ತಾಲೂಕಿನ ಅರಕೇರಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ಹಾಗೂ ಕನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ಆಯೋಡಿನ್ ಕೊರತೆ ದಿನ-ಸಪ್ತಾಹ’ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಅ. 21 ರಿಂದ ವಿಶ್ವ ಆಯೋಡಿನ್ ಕೊರತೆ ನಿವಾರಣಾ ದಿನಾವನ್ನಾಗಿಯು ಹಾಗೂ ಅ.21 ರಿಂದ 27 ರವರೆಗೆ ಸಪ್ತಾಹವನ್ನು ಆಚರಿಸಲಾಗುತ್ತದೆ. ಆಯೋಡಿನ್ ಆಹಾರದ ಮೂಲಕ ದೇಹವನ್ನು ಸೇರುತ್ತದೆ. ಈ ಥೈರಾಕ್ಸಿನ್ ಹಾರ್ಮೋನ್ ದೇಹದ ಮೂಲಭೂತವಾದ ದೈಹಿಕ ಕ್ರಿಯೆಯನ್ನು ಮತ್ತು ಅಂಗಾಂಶಗಳಲ್ಲಿ ಆಮ್ಲಜನಕದ ಉಪಯೋಗವನ್ನು ನಿಯಂತ್ರಿಸುತ್ತದೆ. ದೇಹದ ಗ್ಲುಕೋಸಿನ ಉಪಯೋಗದಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆಯೋಡಿನ ನಮ್ಮ ದೇಹಕ್ಕೆ ಬೇಕಾದ ಒಂದು ಸೂಕ್ಷ್ಮ ಪೋಷಕಾಂಶ. ಅದು ನಮ್ಮ ದಿನ ನಿತ್ಯ ಆಹಾರದಲ್ಲಿ ದೊರಕುತ್ತದೆ. ಹಾಗಾಗಿ ಪೋಷಕಾಂಶವುಳ್ಳ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್. ಬಾಗವಾನ್ ಮಾತನಾಡಿ, ಆಯೋಡಿನ್ ಕೊರತೆಯಿಂದ ರಕ್ತಹೀನತೆ, ಸುಸ್ತು ದೈನಂದಿನ ಕಾರ್ಯ ಚಟುವಟಿಕೆಗಳ ನಿರಾಸಕ್ತಿ, ನಿಧಾನ ನಾಡಿಬಡಿತ, ಕಡಿಮೆ ರಕ್ತದೊತ್ತಡ ಹಾಗೂ ದೇಹದ ಬೊಜ್ಜು ಹೆಚ್ಚಾಗುತ್ತದೆ. ತೀವ್ರವಾದ ಆಯೋಡಿನ್ ಕೊರತೆ ಅಧಿಕ ಕೊಲೆಸ್ಟ್ರಾಲ್ ಹಾಗೂ ಹೃದಯ ರೋಗಗಳಿಗೂ ಕಾರಣವಾಗಬಹುದು. ಗರ್ಭದಲ್ಲಿ ಮಗುವಿನ ಸರ್ಮಪಕ ಬೆಳವಣಿಗೆಗೆ ಮತ್ತು ಮಗುವಿನ ಮಾನಸಿಕ, ದೈಹಿಕ ಬೆಳವಣಿಗೆ ಅದು ಅತ್ಯ ಅವಶ್ಯಕ ಎಂದು ಹೇಳಿದರು.

ಆಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುಧ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣೆಗೆ, ಕಿವುಡು ಮತ್ತು ಮೂಕತನ, ಮೆಳ್ಳೆಗಣ್ಣು, ನಡಿಗೆಯಲ್ಲಿ ಲೋಪದೋಷಗಳು ಕಂಡು ಬರುತ್ತವೆ ಎಂದು ಹೇಳಿದರು.

ಡಾ. ಸುರೇಶ ಪಾಶಾಪೂರ, ಬಿ.ಪಿ. ಜಕ್ಕನ್ನಗೌಡ್ರ, ಅಬ್ದುಲ್‌ರಜಾಕ್ ಪೆಂಡಾರೆ ಮತ್ತಿತರರಿದ್ದರು. ವಿಶ್ವ ಆಯೋಡಿನ್ ಕೊರತೆ ದಿನ-ಸಪ್ತಾಹ’ದ ಕರಪತ್ರ ಬಿಡುಗಡೆಗೊಳಿಸಲಾಯಿತು.