ಮೈಸೂರು: ನಾಡಿನ ಗತವೈಭವ ತಿಳಿಸಿಕೊಡುವ ಜತೆಗೆ ಕರ್ನಾಟಕದ ಏಕೀಕರಣದ ಕಿಚ್ಚು ಹೆಚ್ಚಿಸಿ ಜನರನ್ನು ಬಡಿದೆಬ್ಬಿಸಿದ ಕೀರ್ತಿ ಆಲೂರು ವೆಂಟಕರಾಯರಿಗೆ ಸಲ್ಲುತ್ತದೆ ಎಂದು ಹಿರಿಯ ಸಹಕಾರಿ ಕೆ.ರಘುರಾಂ ವಾಜಪೇಯಿ ಹೇಳಿದರು.
ಕೆಎಂಪಿಕೆ ಟ್ರಸ್ಟ್‌ನಿಂದ ನಗರದ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಆಲೂರು ವೆಂಕಟರಾಯರ 145 ನೇ ಜನ್ಮ ದಿನಾಚರಣೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಮಾತನಾಡಿದರು.
ಏಕೀಕರಣಕ್ಕೂ ಮೊದಲ ಕರ್ನಾಟಕ ರಾಜ್ಯ ಹೈದರಾಬಾದ್, ಮುಂಬೈ, ಮದ್ರಾಸ್ ಪ್ರಾಂತ್ಯದಲ್ಲಿ ಹಂಚಿ ಹೋಗಿತ್ತು. ಅಲ್ಲದೆ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಮರಾಠಿ, ಹಿಂದಿ, ತಮಿಳು ಶಿಕ್ಷಣ ನೀಡಲಾಗುತ್ತಿತ್ತು. ಇದನ್ನು ಮನಗಂಡ ವೆಂಕಟರಾಯರು ಏಕೀಕರಣ ಚಳವಳಿ ನಡೆಸಲು ತಮ್ಮ ಶಾಲಾ ವಿದ್ಯಾರ್ಥಿ ದಿನಗಳಲ್ಲೇ ಮುಂದಾಗಿದ್ದರು ಎಂದರು.
ನಾಡಿನ ಗತ ವೈಭವವನ್ನು ಜನರಿಗೆ ತಿಳಿಸಿಕೊಡುವುದರ ಜತೆಗೆ ಏಕೀಕರಣದ ಕಿಚ್ಚನ್ನು ಹತ್ತಿಸಿ ಬಡಿದೆಬ್ಬಿಸಿದ ಕೀರ್ತಿ ಸಲ್ಲುತ್ತದೆ. ಇದು ನಾಡಿನಾದ್ಯಂತ ಹರಡಿ ದೊಡ್ಡ ಹೋರಾಟವೇ ನಡೆಯಿತು. ಬಳಿಕ ಕನ್ನಡ ಭಾಷೆ ಮಾತನಾಡುವವರನ್ನು ಸೇರಿಸಿ ಕರ್ನಾಟಕ ಏಕೀಕರಣಗೊಂಡಿದೆ. ಇದರ ಕೀರ್ತಿ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ವೆಂಕಟರಾಯರು ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ಕನ್ನಡಿಗರಿಗೆ ಸ್ವ ಉದ್ಯೋಗ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಕರ್ನಾಟಕ ಏಕೀಕರಣ ಪರಿಷತ್ ಮೂಲಕ ಕರ್ನಾಟಕದ ಏಕೀಕರಣ ಮಾಡುವ ಮಹತ್ಕಾರ್ಯ ಮಾಡಿದ್ದರು. ತಮ್ಮ ಬಹುಮುಖ ವ್ಯಕ್ತಿತ್ವದ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಕಾರ್ಯ ಮಾಡಿದ್ದಾರೆ ಎಂದರು.
ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಮಪ್ರಸಾದ್ ಮಾತನಾಡಿ, ಕನ್ನಡದ ಮಹಾನ್ ಚೇತನ , ಕನ್ನಡ ಕನ್ನಡಿಗ ಕರ್ನಾಟಕ ಇರುವ ತನಕ ಮರೆಯಲಾಗದ ವ್ಯಕ್ತಿತ್ವ ಆಲೂರು ವೆಂಕಟರಾಯರದ್ದು. ಅವರು 25ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ್ದಲ್ಲದೇ ಬಾಲಗಂಗಾಧರ ತಿಲಕರ ಗೀತಾ ರಹಸ್ಯವನ್ನ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯಕ್ಕೆ ಘನತೆ ಗೌರವ ತಂದುಕೊಟ್ಟವರು ಎಂದು ಬಣ್ಣಿಸಿದರು.
ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್ (ಬಸಪ್ಪ), ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್, ಜೀವಧಾರಾ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ವಿವಿಧ ಸಂಘಟನೆಯ ಜಿ.ರಾಘವೇಂದ್ರ, ಎಸ್. ಎನ್.ರಾಜೇಶ್, ಮಿರ್ಲೆ ಪಣೀಶ್, ಸುಚಿಂದ್ರ, ಚಕ್ರಪಾಣಿ, ರಾಘವೇಂದ್ರ, ಪುರುಷೋತ್ತಮ, ಸದಾಶಿವ ಇತರರು ಇದ್ದರು.