ಕಲಾದಗಿಯ ಐಬಿ ಕ್ರಾಸ್‌ನಲ್ಲಿ ವಿಶ್ವ ಪ್ರಜಾಪ್ರಭುತ್ವದ ದಿನಾಚರಣೆ ಕಾರ್ಯಕ್ರಮಕ್ಕೆ ಅಧಿಕಾರಿಗಳು, ಗಣ್ಯರು ಚಾಲನೆ ನೀಡಿದರು. 
ಜಿಲ್ಲೆ

ಸಂಭ್ರಮದಿಂದ ಪ್ರಜಾಪ್ರಭುತ್ವ ದಿನ ಆಚರಣೆ

ದತ್ತಾತ್ರೇಯ ಪಿ ಕುಲಕರ್ಣಿ

ಕಲಾದಗಿ: ಗದ್ದನಕೇರಿಯಿಂದ ಖಜ್ಜಿಡೋಣಿವರೆಗೆ ಸಾವಿರಾರು ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ನಾಡಗೀತೆ, ಸಂವಿಧಾನ ಪೀಠಿಕೆ ಓದುವ ಮೂಲಕ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವ ದಿನ ಆಚರಿಸಿದರು.

ಮೊದಲಿನ ಸೂಚನೆಯಂತೆ ಬಾಗಲಕೋಟೆ-ಬೆಳಗಾವಿ ಮುಖ್ಯ ರಸ್ತೆಯಲ್ಲಿ ಬೆಳಗ್ಗೆ 8 ಗಂಟೆ ನಂತ ನಿರ್ಧರಿತ ಸ್ಥಳದಲ್ಲಿ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಮುಖಂಡರು, ಜನಸಾಮಾನ್ಯರು, ಶಿಕ್ಷಕರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉತ್ಸಾಹದಿಂದಿ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಐಬಿ ಕ್ರಾಸ್‌ನಲ್ಲಿ ಮಹಾತ್ಮಾಗಾಂಧಿ ಹಾಗೂ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ ಮತ್ತು ಸದಸ್ಯರು, ಪಿಡಿಒ ಬಿ.ಎಲ್. ಹವಾಲ್ದಾರ್ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಲ್ಲದೆ, ತುಳಸಿಗೇರಿ, ಖಜ್ಜಿಡೋಣಿ ಗ್ರಾಪಂ ವ್ಯಾಪ್ತಿಯಲ್ಲಿಯೂ ಆಯಾ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಿಡಿಒಗಳು ಕಾರ್ಯಕ್ರಮ ಉದ್ಘಾಟಿಸಿದರು.

ನಿಗದಿತ ವೇಳೆಯಲ್ಲೇ ನಾಡಗೀತೆ ಹಾಡಿಸಲಾಯಿತು. ಸಂವಿಧಾನದ ಪೀಠಿಕೆ ಓದಿಸಲಾಯಿತು. ಬಳಿಕ ಪರಸ್ಪರ ಕೈ ಜೋಡಿಸಿ ಮಾನವ ಸರಪಳಿ ನಿರ್ಮಿಸಲಾಯಿತು.

ಪೊಲೀಸ್ ಇಲಾಖೆಯಿಂದ ಬಂದೋಬಸ್ತ್

ಕಾರ್ಯಕ್ರಮ ಮುಖ್ಯ ರಸ್ತೆಯಲ್ಲಿ ನಡೆದಿದ್ದರಿಂದಾಗಿ ವಾಹನ ಸವಾರರಿಗೆ ತೊಂದರೆ ಆಗದಂತೆ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿತ್ತು. ಗ್ರಾಪಂನವರು ವಿದ್ಯಾರ್ಥಿಗಳಿಗೆ ನೀರು, ಚಾಕೋಲೆಟ್ ನೀಡಿದರು.

ಖಜ್ಜಿಡೋಣಿಯ ಗ್ರಾಪಂ ಸದಸ್ಯ ಲಕ್ಷ್ಮಣ ಆನಂದಿ ಸರದಿಯಲ್ಲಿದ್ದವರಿಗೆ ಗುಲಾಬಿ ಹೂ ನೀಡಿದರು. ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಗ್ರಾಪಂ ಪಿಡಿಒಗಳು, ಸದಸ್ಯರುಗಳು ಆಚರಣೆಯಲ್ಲಿ ವ್ಯತ್ಯವಾಗದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದರು. ಬೆಳಗಿನ ಬಿರುಬಿಸಿಲಿನಿಂದ ಬಳಲಿದ ಶಾಲೆ ಮಕ್ಕಳು ಛತ್ರಿ ಆಸರೆ ಪಡೆದುಕೊಂಡರು.