ವಿಜಯಪುರ ನಗರದ ದಖನಿ ಈದ್ಗಾದಲ್ಲಿ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  
ಜಿಲ್ಲೆ

ಶ್ರದ್ಧಾ-ಭಕ್ತಿಯಿಂದ ಬಕ್ರೀದ್ ಆಚರಣೆ, ಈದ್ಗಾಗಳಲ್ಲಿ ನಮಾಜ್ ಸಲ್ಲಿಕೆ, ಮನುಕುಲದ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ

ವಿಜಯಪುರ: ಮುಸ್ಲಿಂ ಸಮುದಾಯದ ವಿಶೇಷ ಆಚರಣೆಗಳಲ್ಲೊಂದಾದ, ತ್ಯಾಗ, ಬಲಿದಾನದ ಪ್ರತೀಕವೂ ಆಗಿರುವ ಬಕ್ರೀದ್ (ಈದ್‌ಉಲ್ ಅದಾ) ನ್ನು ಶನಿವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಕಳದೊಂದು ವಾರದಿಂದ ಸಿದ್ಧತೆ ಕೈಗೊಂಡಿದ್ದ ಮುಸಲ್ಮಾನರು ಹಬ್ಬದ ದಿನ ವಿಶೇಷ ಪ್ರಾರ್ಥನೆ, ಪ್ರವಚನ ಆಲಿಕೆ, ದಾನ, ಸಾಮೂಹಿಕ ಭೋಜನ ಮತ್ತಿತರ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡರು. ನಗರದ ಶಾಹಿ, ಆಲಂಗೀರ ಈದ್ಗಾ, ಇಬ್ರಾಹಿಂ ರೋಜಾ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹನ ನಾಮಸ್ಮರಣೆ ಮಾಡಿದರು. ನಮಾಜ್ ನಂತರ ಮನುಕುಲ ಕಲ್ಯಾಣ ಹಾಗೂ ಒಳಿತಿಗಾಗಿ ದುವಾ ಸಲ್ಲಿಸಿದರು.

ದಖನಿ ಈದ್ಗಾ, ಶಾಹಿ ಈದ್ಗಾ, ಜಾಮೀಯಾ ಮಸೀದಿ, ಅಬೂಬಕರ್ ಮಸೀದಿ, ಧಾತರಿ ಮಸೀದಿ, ಅಲ್-ಅಖ್ಸಾ ಮಸೀದಿ ಸೇರಿದಂತೆ ಹಲವಾರು ಮಸೀದಿಗಳಲ್ಲಿ ಈದ್ ಪ್ರಯುಕ್ತ ವಿಶೇಷ ನಮಾಜ್ ನಂತರ ಮನೆಗಳಲ್ಲಿ ಹಬ್ಬದ ಪ್ರಯುಕ್ತ ಶಿರಕುರಮಾ ಸವಿದರು. ಸ್ನೇಹಿತರು, ಬಂದು-ಬಾಂಧವರಿಗೂ ನೀಡಿ ಸಂಭ್ರಮಿಸಿದರು. ಹಬ್ಬದ ಹಿನ್ನೆಲೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು.

ಧರ್ಮ ಸಂದೇಶ

ಐತಿಹಾಸಿಕ ಆಲಂಗೀರ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಧರ್ಮ ಸಂದೇಶ ನೀಡಿದ ಕರ್ನಾಟಕ ಅಹಲೆ ಸುನ್ನತ್ ಜಮಾತ್ ರಾಜ್ಯಾಧ್ಯಕ್ಷ ಮೌಲಾನಾ ಸೈಯ್ಯದ್ ತನ್ವೀರಪೀರಾ ಹಾಶ್ಮೀ ಮಾತನಾಡಿ, ಅಹಂಕಾರ, ದುರ್ಗುಣ, ದುಶ್ಚಟಗಳನ್ನು ತ್ಯಾಗ ಮಾಡಬೇಕು. ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬದ ಸಂಭ್ರಮದಲ್ಲಿ ನಮ್ಮಲ್ಲಿರುವ ನಕಾರಾತ್ಮಕ ಅಂಶಗಳಾದ ಅಹಂಕಾರ, ದುರ್ಗುಣ, ದುಶ್ಚಟಗಳ ಸಹವಾಸವನ್ನು ತ್ಯಜಿಸಬೇಕು ಎಂದರು.

ದುಶ್ಚಟಗಳಿಂದ ಮನುಷ್ಯನ ಬದುಕು ಅಂಧಕಾರದಲ್ಲಿ ಮುಳಗಿ ಹೋಗುತ್ತದೆ. ಅಹಂಕಾರ ಮನುಷ್ಯನನ್ನೇ ನಾಶ ಮಾಡುತ್ತದೆ ಎಂದರು.

ಬಡವರ ಕಲ್ಯಾಣಕ್ಕಾಗಿ ಧನವನ್ನು ತ್ಯಾಗ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ನಾವು ಸದಾ ಸತ್ಯದ ಪಥದಲ್ಲಿ ನಡೆಯಬೇಕು, ಸುಳ್ಳು ಒಂದು ರೀತಿ ಪಾಪದ ಪ್ರತಾಪಕ್ಕೆ ತಳ್ಳುತ್ತದೆ, ಸುಳ್ಳು ಮನುಷ್ಯನನ್ನು ಹಾಳು ಮಾಡುತ್ತದೆ, ಹೀಗಾಗಿ ಸುಳ್ಳಿನ ದಾರಿ ಬಿಟ್ಟು ಸತ್ಯದ ಮಾರ್ಗದಲ್ಲಿ ನಡೆಯಿರಿ, ಬೆನ್ನು ಹಿಂದೆ ಮಾತನಾಡುವುದನ್ನು, ಸ್ನೇಹಿತರನ್ನು, ಬಂಧು-ಬಾಅಧವರನ್ನು ತೆಗಳುವನ್ನು ಅಲ್ಲಾಹು ಇಷ್ಟಪಡುವುದಿಲ್ಲ ಎಂದರು.

ಆಸಾರ್ ಮಹಲ್‌ನಲ್ಲಿ ವಿಶೇಷ ಪ್ರಾರ್ಥನೆ

ಆಸಾರ್ ಮಹಲ್ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು. ಮೌಲಾನಾ ಸೈಯ್ಯದ್ ಪೈಸಲ್ ಸಕಾಫ ಸಾದಾತ್ ಸಂದೇಶ ನೀಡುತ್ತಾ, ಮಾನವ ಜನ್ಮ ಬಹು ದೊಡ್ಡದು. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಮಾನವೀಯತೆಯ ಜೀವನಕ್ಕೆ ಮಹತ್ವ ನೀಡಬೇಕು. ಪ್ರವಾದಿಗಳು ತೋರಿದ ದಾರಿಯಲ್ಲಿ ಸಾಗಿ ಜೀವನದಲ್ಲಿ ಮುನ್ನಡೆಯಬೇಕು ಎಂದರು.