ಚಿಕ್ಕಬಳ್ಳಾಪುರ: ಎಲ್ಲೆಡೆ ಹೊಸ ವರ್ಷ 2023ರ ಅದ್ದೂರಿ ಸಂಭ್ರಮಾಚರಣೆಯು ಕಂಡು ಬಂದಿದ್ದು, ಹಲವರು ಆತ್ಮೀಯರೊಂದಿಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣ ಮತ್ತು ಆಲಯಗಳಿಗೆ ತೆರಳಿ ಖುಷಿಪಟ್ಟರು. ನಂದಿ ಬೆಟ್ಟ, ಸ್ಕಂದಗಿರಿ, ಆವುಲಬೆಟ್ಟ, ವಿದುರಾಶ್ವತ್ಥ, ರಂಗಸ್ಥಳ, ಮುರುಗಮಲ್ಲಾ ಸೇರಿ ವಿವಿಧೆಡೆ ಪ್ರವಾಸಿಗರು ಭೇಟಿ ನೀಡಿದರು. ನಂದಿ ಗಿರಿಧಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿ.31ರ ಸಂಜೆ 6ರಿಂದ ಜನವರಿ 1 ಬೆಳಗ್ಗೆ 6 ರವರೆಗೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾ ಪೊಲೀಸ್ ಇಲಾಖೆ ನಿಷೇಧಿಸಿತ್ತು. ಹೊಸ ವರ್ಷದ ಮೊದಲ ದಿನ, ಅದರಲ್ಲೂ ರಜಾ ದಿನ ಬೆಳಗ್ಗೆ 5ಕ್ಕೆ ಪ್ರವಾಸಿಗರು ಗಿರಿಧಾಮಕ್ಕೆ ಆಗಮಿಸಿದ್ದು, ಪೊಲೀಸರು ಬೆಳಗ್ಗೆ 6 ರ ಬಳಿಕ ಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್‌ನಿಂದ ತೆರಳಲು ಅವಕಾಶ ನೀಡಿದರು.
ರಾಜ್ಯ ಮಾತ್ರವಲ್ಲದೆ ನೆರೆ ರಾಜ್ಯಗಳಿಂದಲೂ ಐಟಿ ಬಿಟಿ ಕಂಪೆನಿ ಟೆಕ್ಕಿಗಳು, ಪ್ರೇಮಿಗಳು, ನೂತನ ದಂಪತಿ, ಮಕ್ಕಳು ಸೇರಿ ಹಲವರು ಬೆಟ್ಟದಲ್ಲಿ ತಿರುಗಾಡಿದರು. ಟಿಪ್ಪು ಡ್ರಾಪ್, ಬೇಸಿಗೆ ಅರಮನೆ, ನೆಹರೂ ನಿಲಯ, ಗಾಂಧಿನಿಲಯ, ಮಕ್ಕಳ ಉದ್ಯಾನ ವೀಕ್ಷಿಸಿದರಲ್ಲದೆ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡರು. ಜತೆ ಜತೆಯಲ್ಲಿ ತಿಂಡಿ ತಿನಿಸುಗಳನ್ನು ಸವಿದರು.
ಹೊಸ ವರ್ಷ ಮತ್ತು ರಜಾ ದಿನ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ 8ರಿಂದ 9 ಸಾವಿರ ಮಂದಿ ಬಂದಿದ್ದರು. ಸಾಮಾನ್ಯ ವಿಶೇಷ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ ಎಂದು ಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್ ತಿಳಿಸಿದ್ದಾರೆ.
ಆಲಯದಲ್ಲಿ ಕಿಕ್ಕಿರಿದ ಜನ
ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಸೇಂಥ್ ಕ್ಸೇವಿಯರ್, ಸಿಎಸ್‌ಐ ಚರ್ಚುಗಳಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಯಿತು. ಹಲವರು ಮೇಣದ ಬತ್ತಿಗಳನ್ನು ಹಚ್ಚಿ ಬಳಿಕ ಪರಸ್ಪರ ಶುಭಾಶಯ ತಿಳಿಸಿದರು. ಹಾಗೆಯೇ ನಂದಿಯ ಭೋಗನಂದೀಶ್ವರಸ್ವಾಮಿ ಮತ್ತು ನಂದಿ ಗಿರಿಧಾಮದ ಯೋಗ ನಂದೀಶ್ವರ ಸ್ವಾಮಿ ದೇವಾಲಯ, ನಗರದ ವೆಂಕಟರಮಣಸ್ವಾಮಿ, ಶನಿಮಹಾತ್ಮಸ್ವಾಮಿ, ಅಯ್ಯಪ್ಪಸ್ವಾಮಿ, ಮರಳು ಸಿದ್ದೇಶ್ವರಸ್ವಾಮಿ ಸೇರಿ ವಿವಿಧ ಆಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಪರ್ಯಾಯ ಸ್ಥಳಗಳಲ್ಲಿ ಆಚರಣೆ
ಗಿರಿಧಾಮದಲ್ಲಿ ನಡುರಾತ್ರಿ ಹೊಸ ವರ್ಷಾಚರಣೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಯುವಕ-ಯುವತಿಯರು ಖಾಸಗಿ ರೆಸಾರ್ಟ್, ವಿಲ್ಲಾ, ತೋಟದ ಮನೆ ಸೇರಿ ಪರ್ಯಾಯ ಸ್ಥಳಗಳಲ್ಲಿ ಕೇಕು ಕತ್ತರಿಸಿ ಸಂತಸದಿಂದ ಕುಣಿದು ಕುಪ್ಪಳಿಸಿದರು. ರಾತ್ರಿ 12 ಆಗುತ್ತಿದ್ದಂತೆ ಅಲ್ಲಲ್ಲಿ ಪಟಾಕಿಗಳ ಸದ್ದು ಕೇಳಿ ಬಂತು. ಕೆಲ ಯುವಕರು ಘೋಷಣೆಗಳೊಂದಿಗೆ ಬೈಕ್‌ಗಳಲ್ಲಿ ತೆರಳಿ ಖುಷಿಪಟ್ಟರು.
ಬಿಗಿ ಭದ್ರತೆ
ಹೊಸ ವರ್ಷಾ ಚರಣೆಯ ಸಂಭ್ರಮದ ನೆಪದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಬಂದೋಬಸ್ತ್ ಕೈಗೊಂಡಿತ್ತು. ರಾತ್ರಿ ಪೊಲೀಸ್ ಗಸ್ತು ವಾಹನಗಳು ಸೈರನ್ ಶಬ್ದದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದವು. ಯಾವುದೇ ಸಿಬ್ಬಂದಿಗೆ ರಜೆ ನೀಡದೆ ಬೀಟ್ ವ್ಯವಸ್ಥೆ ಹೆಚ್ಚಿಸಲಾಗಿತ್ತು.
ಭರ್ಜರಿ ವ್ಯಾಪಾರ
ಬಹುತೇಕ ಹೋಟೆಲ್, ಬೇಕರಿ, ಅಂಗಡಿಗಳಲ್ಲಿ ಜನ ತುಂಬಿ ತುಳುಕಾಡುತ್ತಿದ್ದರಿಂದ ಭರ್ಜರಿ ವಹಿವಾಟು ನಡೆಯಿತು. ಪಾಲಕರು ಮಕ್ಕಳೊಂದಿಗೆ ಪಾರ್ಟಿಗೆ ಬಂದು ಇಷ್ಟವಾದ ಆಹಾರ ಸವಿದರು. ಬಗೆಬಗೆಯ ಕೇಕುಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಮತ್ತೊಂದೆಡೆ ಬಾರುಗಳಲ್ಲಿ ಮದ್ಯ ಖರೀದಿಯೂ ಜೋರಾಗಿತ್ತು.