ಶಿಕ್ಷಣ ಕೇವಲ ಪಾಠದಿಂದ ಮಾತ್ರ ಬರುವುದಲ್ಲ, ಶಿಕ್ಷಕರ ನಡೆ ನುಡಿಗಳೂ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತವೆ. ಮಕ್ಕಳ ಮೇಲೆ ಪರಿಣಾಮ ಬೀರುವ ಮಾದರಿ ನಡೆಯನ್ನು ಕನಕಪುರ ತಾಲೂಕಿನ ಶಿಕ್ಷಕ ವೃಂದ ಶಾಲಾ ವಾಸ್ತವ್ಯ ಎನ್ನುವ ವಿಭಿನ್ನ ಪ್ರಯತ್ನದ ಮೂಲಕ ಮಾಡುತ್ತಾ ಬಂದಿದ್ದು, ಇದಕ್ಕೆ ಈಗ ದಶಕದ ಸಂಭ್ರಮ.
ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ಸರ್ಕಾರದ ನೀತಿಗಳ ಪರಿಣಾಮ ತಾವಾಯಿತು ತಮ್ಮ ಪಾಠವಾಯಿತು ಎನ್ನುವ ಲೆಕ್ಕದಲ್ಲಿ ಶಿಕ್ಷಕರು ತಮ್ಮ ಪಾಠಗಳನ್ನು ಮುಗಿಸಿ ಮನೆ ದಾರಿ ಹಿಡುಯುತ್ತಾರೆ. ಆದರೆ ಕನಕಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಹಿಂದುಳಿದ ಹಾಗೂ ಮೂಲ ಸೌಕರ್ಯಗಳ ಕೊರತೆ ಇರುವ ಶಾಲೆಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಶಾಲಾ ವಾಸ್ತವ್ಯದ ಮೂಲಕ ಶಾಲೆಯ ಚಿತ್ರಣವನ್ನು ಬದಲಿಸುವ ಪ್ರಯತ್ನ ಮಾಡುತ್ತಿದೆ. ಪ್ರತಿ ವರ್ಷ ಒಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ವಾಸ್ತವ್ಯ ಹೂಡುತ್ತಾರೆ.
2014ರಲ್ಲಿ ತಮಿಳುನಾಡು ಗಡಿಗೆ ಹೊಂದಿಕೊಂಡಂತೆ ಇರುವ ಕೊಳಗೊಂಡನಹಳ್ಳಿ ಎನ್ನುವ ಹಿಂದುಳಿದ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಮೊದಲ ಶಾಲಾ ವಾಸ್ತವ್ಯ ಮಾಡಲಾಗಿತ್ತು. ನಂತರ ಕನಕಪುರ ತಾಲೂಕಿನ ಬಿಇಒ ಕಚೇರಿ ಇದ್ದ ಸರ್ಕಾರಿ ಶಾಲೆ ಸೇರಿ ಒಟ್ಟು 10 ಶಾಲೆಗಳಿಗೆ ಹೊಸ ರೂಪವನ್ನು ಕನಕಪುರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉತ್ಸಾಹಿ ತಂಡ ಮಾಡಿದೆ. ಈ ಬಾರಿ ಕನಕಪುರ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ.
ಈ ಬಾರಿ ಮೂರು ದಿನಗಳ ಕಾಲಾ ಶಾಲಾ ವಾಸ್ತವ್ಯ ನಡೆಯಲಿದೆ. ತಮ್ಮ ಶಾಲೆಗಳಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡಿ, ಜಿಎಲ್‌ಪಿಎಸ್ ಮರಸರಹಳ್ಳಿಗೆ ತೆರಳುವ ತಂಡ, ಜ.26, 27 ಮತ್ತು 28ರಂದು ವಾಸ್ತವ್ಯ ಹೂಡಿ, ಶಾಲಾ ಆವರಣದ ಸ್ವಚ್ಛತೆ, ಅಗತ್ಯವಿರುವ ಸಣ್ಣಪುಟ್ಟ ದುರಸ್ಥಿ ಕಾರ್ಯ ಹಾಗೂ ಶಾಲಾ ಕೊಠಡಿಗಳಿಗೆ ಬಣ್ಣ ಬಳಿಯುವುದು, ಮಕ್ಕಳಿಗೆ ಕಲಿಕೆಗೆ ಪೂರಕವಾದ ಚಿತ್ರಗಳ ರಚನೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ಮಾಡಲಿದೆ. ಇಷ್ಟೆಲ್ಲದೆ, ಇಲ್ಲಿರುವ ಮಕ್ಕಳ ಕಲಿಕೆಗೆ ಪೂರಕ ಕಲಿಕಾ ಸಾಮಗ್ರಿಗಳನ್ನು ಈ ತಂಡ ದಾನಿಗಳ ಮೂಲಕ ಮಕ್ಕಳಿಗೆ ಒದಗಿಸಿದೆ.
ಕನಕಪುರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆರಂಭಿಸಿದ ಶಾಲಾ ವಾಸ್ತವ್ಯ ಚಟುವಟಿಕೆ, ಶಿಕ್ಷಕರ ಆರಂಭಗೊಂಡ ವಿಭಿನ್ನ ಪ್ರಥಮ ಪ್ರಯೋಗ. ನಂತರ ಕನಕಪುರ ಶಾಲಾ ಶಿಕ್ಷಕರ ಮಾದರಿಯಲ್ಲಿಯೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಇದರ ಪ್ರಯೋಗ ನಡೆಯಿತು. ಅಲ್ಲದೆ, ಶಿಕ್ಷಕರ ಈ ನಡೆಗೆ ವ್ಯಾಪಕ ಮೆಚ್ಚುಗೆ ಹಾಗೂ ಬೆಂಬಲವೂ ದೊರೆಯಿತು. ಇದರ ಪರಿಣಾಮ ಕಳೆದ 10 ವರ್ಷಗಳಿಂದಲೂ ಶಿಕ್ಷಕರು ಉತ್ಸಾಹದಿಂದ ಶಾಲಾ ವಾಸ್ತವ್ಯ ಕಾರ್ಯಕ್ರಮ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ನೇ.ರ.ಪ್ರಭಾಕರ, ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕನಕಪುರ