ಅಂಕೋಲಾ: ಜನರ ಭಾವನೆ ಹಾಗೂ ಕಾನೂನಿಗೆ ಭಂಗ ಬಾರದಂತೆ ಗಣೇಶೋತ್ಸವ ಆಚರಿಸೋಣ ಎಂದು ತಹಸೀಲ್ದಾರ್ ಅಶೋಕ ಭಟ್ ಹೇಳಿದರು.
ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಏರ್ಪಡಿಸಿದ್ದ ಗಣೇಶೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಲಮಾಲಿನ್ಯ, ಶಬ್ಧಮಾಲಿನ್ಯ ಆಗದಂತೆ ಪ್ಲಾಸ್ಟಿಕ್ ನಿಷೇಧಿಸಿ ಕಾನೂನಿನ ಚೌಕಟ್ಟಿನಡಿ ಪರಿಸರ ಸ್ನೇಹಿಯಾಗಿ ಗಣೇಶೋತ್ಸವವನ್ನು ಆಚರಿಸೋಣ ಎಂದರು.
ಪಿಐ ಸಂತೋಷ ಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ 84 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿವೆ. ಯಾರಿಗೂ ಸಮಸ್ಯೆಯಾಗದಂತೆ ಸಂಬಂಧಿಸಿದ ಸ್ಥಳೀಯ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು. ಸ್ಥಳದಲ್ಲಿ ಸಿಸಿ ಕ್ಯಾಮೆರಾದ ಕಣ್ಗಾವಲು ಇರಲಿ. ಅಕ್ರಮ ಚಟುವಟಿಕೆಗಳನ್ನು ನಡೆಸಬೇಡಿ, ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಜಾಗೃತಿ ವಹಿಸಬೇಕು ಎಂದರು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ ನಾಯ್ಕ, ಅಗ್ನಿಶಾಮಕ ಠಾಣಾಧಿಕಾರಿ ಗಜಾನನ ನಾಯ್ಕ, ಪುರಸಭೆ ವ್ಯವಸ್ಥಾಪಕಿ ಸುರೇಖಾ ಪಾರ್ಸೇಕರ ಇತರರು ಉಪಸ್ಥಿತರಿದ್ದರು.