ಮಧುಗಿರಿ: ಗೌರಿ- ಗಣೇಶ ಮತ್ತು ಈದ್ಮಿಲಾದ್ ಹಬ್ಬದ ಸಂಧರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಿ. ಭಕ್ತಿ ಭಾವನೆಯಿಂದ ನಮ್ಮ ಸಂಸತಿ ಉಳಿಸುವ ರೀತಿಯಲ್ಲಿ ಹಬ್ಬಗಳನ್ನು ಆಚರಿಸಿ ಎಂದು ಮಧುಗಿರಿ ಡಿವೈಎಸ್ಪಿ ಮಂಜುನಾಥ್ ತಿಳಿಸಿದರು.
ಗೌರಿ ಗಣೇಶ ಹಬ್ಬಮತ್ತು ಈದ್ಮಿಲಾದ್ ಹಬ್ಬದ ಪ್ರಯುಕ್ತ ಮಧುಗಿರಿ ಪೋಲಿಸ್ ಠಾಣೆ ಆವರಣದಲ್ಲಿ ಮಂಗಳವಾರ ಹಿಂದು ಮತ್ತು ಮುಸ್ಲಿಮರ ಶಾಂತಿ ಸಭೆ ನಡೆಸಿ ಮಾತನಾಡಿ, ಗಣೇಶ ಮೂರ್ತಿ ಇಡಲು ಅನುಮತಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನಿನ ಕ್ರಮ ತೆಗೆದು ಕೊಳ್ಳಲಾಗುವುದು. ಡಿಜೆಗೆ ಅನುಮತಿ ಇಲ್ಲ ಯಾರು ಕೂಡ ಡಿಜಿ ಉಪಯೋಗಿಸಬಾರದು, ಮೆರವಣಿಗೆ ಮಾರ್ಗವನ್ನು ಮೊದಲೇ ತಿಳಿಸಿರಬೇಕು. ಮಧುಗಿರಿ ಜನತೆ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದು, ಸ್ಥಳಿಯರಿಂದ ಯಾವುದೇ ಗಲಭೆಗಳು ಉಂಟಾದ ನಿದರ್ಶನಗಳಿಲ್ಲ. ಹೊರಗಿನವರು ಬಂದು ಗಲಾಟೆ ಮಾಡಿರುವುದೇ ಕಂಡುಬಂದಿದ್ದು, ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.
ವೃತ್ತ ನಿರೀಕ್ಷಕ ಹನುಮಂತ ರಾಯಪ್ಪ ಮಾತನಾಡಿ, ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಬಲವಂತವಾಗಿ ಯಾರು ಕೂಡ ಸಾರ್ವಜನಿಕರಿಂದ ವಂತಿಕೆ ಹಣ ವಸೂಲಿ ಕೇಳಬಾರದು. ಊರಿಗೊಂದು ಗಣಪತಿ ಇಟ್ಟರೆ ಗ್ರಾಮ ಮತ್ತು ಪಟ್ಟಣದಲ್ಲಿ ಶಾಂತಿಯುತ ವಾತಾವರಣ ಇರುತ್ತದೆ ಎಂದರು.
ಮಧುಗಿರಿಯ ಉಪನಿರೀಕ್ಷಕ ಮುತ್ತುರಾಜ್ ಮಾತನಾಡಿ, ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ಪಡೆದವರು ಗಣೇಶನ ವಿಸರ್ಜನೆ ಮಾಡುವವರೆಗೂ ಅವರೆ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮತ್ತೆ ಅಹಿತಕರ ಘಟನೆ ನಡೆದಂತ ಸಂದರ್ಭದಲ್ಲಿ ನನಗೆ ಗೊತ್ತಿಲ್ಲ ಎನ್ನುವಂತಿಲ್ಲ ಎಂದರು.
ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್ ಮಾತನಾಡಿ, ಮನೆಯಲ್ಲಿ ಪತಿಷ್ಠಾಪನೆ ಮಾಡಿರುವ ಗಣೇಶ ವಿಸರ್ಜನೆಗೆ ಪುರಸಭೆಯಿಂದ ಮೊಬೈಲ್ ವಾಹನವನ್ನು ಮನೆಗಳ ಮುಂದೆಯೇ ಕಳುಹಿಸಿಕೊಡಲಾಗುವುದು. ಸಾರ್ವಜನಿಕರು ಅದರಲ್ಲೇ ವಿಸರ್ಜನೆ ಮಾಡಬಹುದು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಗಣಪತಿ ವಿಸರ್ಜನೆಗೆ ಕೃತಕ ನೀರಿನ ತೊಟ್ಟಿ ಮಾಡಲಾಗಿದೆ ಹಾಗೂ ಅದಷ್ಟು ಪ್ಲಾಸ್ಟಿಕನ್ನು ಬಳಸಬೇಡಿ ಎಂದರು.
ಅಗ್ನಿಶಾಮಕ ಠಾಣೆಯ ಹನುಮಂತ ರಾಯಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಬಿ.ಗೋವಿಂದರಾಜು, ಸದಸ್ಯರಾದ ಹಲೀಮ್, ಜಾಮಿಯಾ ಮಸೀದಿ ಅಧ್ಯಕ್ಷ, ಶ್ರೀ ವಿದ್ಯಾ ಗಣಪತಿ ಮಹಾಮಂಡಳಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಇದ್ದರು.