ಜಿಲ್ಲೆ

ಭಾವೈಕ್ಯದೊಂದಿಗೆ ಹಬ್ಬ ಆಚರಿಸಿ

ಸವಣೂರ: ಸರ್ಕಾರದ ಆದೇಶ ಪಾಲಿಸುವ ಜತೆಗೆ ಭಾವೈಕ್ಯದೊಂದಿಗೆ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಬೇಕು ಎಂದು ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಹೇಳಿದರು.

ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಣೇಶ ಚರ್ತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಬ್ಬ ಆಚರಣೆಯ ಸಮಿತಿ ಪದಾಧಿಕಾರಿಗಳು ಅಗತ್ಯ ಪರವಾನಗಿ ಪಡೆದು, ಅವಘಡ ಸಂಭವಿಸದಂತೆ ಮುಂಜಾಗ್ರತೆ ಕ್ರಮ ಕೈಗೊಂಡು ಹಬ್ಬ ಆಚರಿಸಬೇಕು ಎಂದರು.

ಡಿವೈಎಸ್‌ಪಿ ಮಂಜುನಾಥ ಜಿ. ಮಾತನಾಡಿ, ಪರಸ್ಪರ ಸಹಕಾರ, ಸರ್ಕಾರದ ಆದೇಶ ಪಾಲನೆಯೊಂದಿಗೆ ಶಿಸ್ತು, ಶಾಂತಿಯೊಂದಿಗೆ ಹಬ್ಬ ಆಚರಿಸಬೇಕು ಎಂದರು.

ತಹಸೀಲ್ದಾರ್ ಗಣೇಶ ಸವಣೂರ, ಹೆಸ್ಕಾಂ ಎಇಇ ಗೌಸಪೀರ್ ಎಂ., ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪಿಐ ಆನಂದ ಒನಕುದರೆ, ಪಿಎಸ್‌ಐ ಮೇಘರಾಜ ದೊಡ್ಡಮನಿ, ಪಿಎಸ್‌ಐ ಎಸ್.ಕೆ. ಪೋಲಿಸಗೌಡ್ರ, ಸಿಬ್ಬಂದಿ, ಅಬಕಾರಿ ಪಿಐ ಮಹೇಶಗೌಡ ಪಾಟೀಲ, ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಪರಶುರಾಮ ಲಮಾಣಿ ಇತರರು ಇದ್ದರು. ಎಎಸ್‌ಐ ಕೆ.ಜಿ. ರೂಗಿ ನಿರ್ವಹಿಸಿದರು.

ಸಹಕಾರದ ಭರವಸೆ

ಶಾಂತಿ ಸಭೆಗೆ ಆಗಮಿಸಿದ್ದ ಗಣೇಶ ಸ್ಥಾಪನೆ ಮಂಡಳಿಗಳ ಪದಾಧಿಕಾರಿಗಳಾದ ಅರುಣ ಬಗರೆ, ಪ್ರವೀಣ ಚರಂತಿಮಠ, ಶಂಕ್ರಯ್ಯ ಹಿರೇಮಠ, ಪ್ರವೀಣ ಬಾಲೇಹೊಸೂರ, ಈರಯ್ಯ ಹಿರೇಮಠ ಹಾಗೂ ಇತರರು ಮಾತನಾಡಿ, ಹಬ್ಬ ಆಚರಣೆ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆ, ಗಣೇಶ ಮೂರ್ತಿ ಮೆರವಣಿಗೆಯ ರಸ್ತೆ ದುರಸ್ತಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕೋರಿದರು.

ಪ್ರತಿಕ್ರಿಯಿಸಿದ ಅಧಿಕಾರಿಗಳು, ಸಾರ್ವಜನಿಕರ ಬೇಡಿಕೆ ಈಡೇರಿಸಿ, ಹಬ್ಬ ಆಚರಣೆಗೆ ಸರ್ವರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದರು.