raichur 
ಜಿಲ್ಲೆ

ಸಂಭ್ರಮದಿಂದ ಮಣ್ಣೆತ್ತಿನ ಹಬ್ಬ ಆಚರಣೆ

 ರಾಯಚೂರು ಉತ್ತರ ಕರ್ನಾಟಕ ಭಾಗದ ಜನರು ಮುಂಗಾರಿನಲ್ಲಿ ವಿಶೇಷವಾಗಿ ಆಚರಿಸುವ ಮಣ್ಣೆತ್ತಿನ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ಸಂಭ್ರಮ ಸಡಗರದಿಂದ ಆಚರಿಸಿದರು.

ನಗರದ ನಾನಾ ಬಡಾವಣೆಗಳಲ್ಲಿ ಮಣ್ಣೆತ್ತಿನ ಹಬ್ಬದ ನಿಮಿತ್ತ ಮಣ್ಣಿನಿಂದ ಮಾಡಿದ ಬಣ್ಣ ಬಣ್ಣದ ಎತ್ತುಗಳು ಮಾರಾಟವಾದವು. ಪ್ರಾಚೀನ ಕಾಲದಿಂದಲೂ ನಡೆದು ಬಂದ ಈ ಪದ್ದತಿ ಇದೀಗ ಆಧುನಿಕ ಸ್ವರೂಪ ಪಡೆದುಕೊಂಡಿದೆ. ಹುತ್ತಗಳಿಂದ ತಂದ ಮಣ್ಣಿನಿಂದ ಕಲಾತ್ಮಕವಾಗಿ ಎತ್ತುಗಳನ್ನು ತಯಾರಿಸಲಾಗುತ್ತಿತ್ತು. ಇದೀಗ ತಯಾರಿಸಿದ ಎತ್ತುಗಳಿಗೆ ರಂಗು ತುಂಬಿಸುವಲ್ಲಿ ವ್ಯಾಪಾರಿಗಳು ಮುಂದಾಗುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.


ನಗರದ ಕುಂಬಾರ ಓಣಿಯಲ್ಲಿ ಮಣ್ಣಿನ ಎತ್ತುಗಳನ್ನು ಮಾರಾಟ ಮಾಡುವುದು ಪ್ರತಿ ವರ್ಷವೂ ನಡೆದು ಬಂದಿದೆ. ಆದರೆ ಈ ಬಾರಿ ಎತ್ತುಗಳಿಗೆ ಬಣ್ಣ ಬಳಿದು ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯ ನಾನಾಕಡೆ ಮಣ್ಣೆತ್ತಿನ ಅಮವಾಸೆಯನ್ನು ಜನರು ಸಂಭ್ರಮದಿಂದ ಆಚರಿಸಲಾಯಿತು. ಮಣ್ಣಿನಿಂದ ಎತ್ತುಗಳನ್ನು ತಂದು ಮನೆಯ ಜಗಲಿಯ ಮೇಲಿಟ್ಟು ಪೂಜೆ ಸಲ್ಲಿಸಲಾಯಿತು.