ಜಿಲ್ಲೆ

ಶಾಂತಿ-ಸೌಹಾರ್ದದಿಂದ ಮೊಹರಂ ಆಚರಿಸಿ

ವಿವೇಕಾನಂದ ದಾಸನಕೊಪ್ಪ

ಹಾನಗಲ್ಲ: ಶಾಂತಿ-ಸೌಹಾರ್ದದಿಂದ ಮೊಹರಂ ಹಬ್ಬವನ್ನು ಆಚರಿಸಬೇಕು ಎಂದು ಡಿವೈಎಸ್‌ಪಿ ಜಿ. ಮಂಜುನಾಥ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಸಾರ್ವಜನಿಕರ ರಕ್ಷಣೆಗಾಗಿಯೇ ಇದೆ. ಆದರೆ, ಎಲ್ಲವೂ ಪೊಲೀಸರಿಂದಲೇ ಸಾಧ್ಯವಿಲ್ಲ. ಸಾರ್ವಜನಿಕರ ಸೌಹಾರ್ದಯುತ ಸಹಕಾರ ಅತ್ಯಂತ ಮುಖ್ಯ. ಹಿಂದು-ಮುಸ್ಲಿಮರು ಶಾಂತಿಯುತವಾಗಿ ಹಬ್ಬ ಆಚರಣೆಗ ಸಹಕರಿಸಬೇಕು ಎಂದು ಮನವಿ ಮಾಡಿದರು.

ಹಾನಗಲ್ಲ ಸಿಪಿಐ ಆರ್. ವೀರೇಶ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಮೆರವಣಿಗೆ ನಡೆಸಿದ ರಸ್ತೆಗಳಲ್ಲಿಯೇ ಈ ವರ್ಷವೂ ನಡೆಸುವುದಾದರೆ ಅದನ್ನು ಮೊದಲೇ ಮಾಹಿತಿ ನೀಡಬೇಕು. ಮಾರ್ಗ ಬದಲಾವಣೆ ಇದ್ದರೂ ಅದಕ್ಕಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು.

ಮುಖಂಡರಾದ ಗುರುರಾಜ ನಿಂಗೋಜಿ ಹಾಗೂ ಫೈರೋಜ್ ಶಿರಬಡಗಿ ಮಾತನಾಡಿ, ಹಾನಗಲ್ಲಿನಲ್ಲಿ ಹಿಂದು-ಮುಸ್ಲಿಂ ಹಬ್ಬಗಳನ್ನು ಅತ್ಯಂತ ಸೌಹಾರ್ದಯುತವಾಗಿ ಆಚರಿಸಲಾಗುತ್ತದೆ. ಆದರೆ, ಕೆಲವು ಕಿಡಿಗೇಡಿಗಳು ಮಾಡುವ ಕೃತ್ಯಗಳಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಅಂತಹವರಿಂದಲೇ ಎಲ್ಲ ಹಬ್ಬಗಳು ಅರ್ಥ ಕಳೆದುಕೊಳ್ಳುತ್ತವೆ. ಪೊಲೀಸ್ ಇಲಾಖೆ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು. ಹಿಂದು-ಮುಸ್ಲಿಂ ಎಂಬ ಭೇದಕ್ಕೆ ಇಲ್ಲಿ ಅವಕಾಶವಿಲ್ಲ. ಹಬ್ಬಗಳು ನಮ್ಮ ನಮ್ಮ ಧಾರ್ಮಿಕ ವಿಚಾರಗಳಾಗಿವೆ. ಹಾನಗಲ್ಲ ಶಾಂತಿಯುತ ಹಬ್ಬದ ಆಚರಣೆಗೆ ಹೆಸರಾಗಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದರು.

ಹಾನಗಲ್ಲ ಪಿಎಸ್‌ಐ ಕೆ.ಸಿ. ಚಲುವಯ್ಯ, ಸಿಕಂದರ ವಾಲಿಕಾರ, ಜಾಫರ್ ಬಾಳೂರ, ಬಾಬಾಜಾನ್ ಕೊಂಡವಾಡಿ, ನಿಸಾರ್ ಗೌಂಡಿ, ನಿಸಾರ್ ಪಾನವಾಲೆ, ಇರ್ಫಾನ್ ಇನಾಂದಾರ, ಇರ್ಫಾನ್ ಮಿಠಾಯಿಗಾರ, ಖುರ್ಷಿದ ಹುಲ್ಲತ್ತಿ, ಫೈರೋಜ್ ಜಾಗೀರದಾರ, ಅಬುತಾಯಿರ್ ರಾವುತರ, ನಾಸಿರ್ ಖಾಜಿ, ಖಾಲಿದ್ ಶೇಷಗಿರಿ, ಪ್ರಶಾಂತ ಗೊಂದಿ, ಪ್ರವೀಣ ಸುಲಾಖೆ, ಸುರೇಶ ನಾಗಣ್ಣನವರ, ಪರಶುರಾಮ ಖಂಡೂನವರ ಇತರರಿದ್ದರು.