ಮೈಸೂರು: ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್‌ನಿಂದ ಮಹಾಶಿವರಾತ್ರಿಯನ್ನು ಶ್ರೀ ಅರ್ಜುನ ಅವಧೂತರ ಸಾನ್ನಿಧ್ಯದಲ್ಲಿ ನಾಲ್ಕು ಜಾವದ ಪೂಜೆ ಮೂಲಕ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ನಾರಾಯಣ ಶಾಸ್ತ್ರಿ ರಸ್ತೆ ಸೋನಾರ್ ಬೀದಿಯಲ್ಲಿರುವ ಗುರು ನಿವಾಸದಲ್ಲಿ ನಡೆದ ಮಹಾಶಿವರಾತ್ರಿ ಪೂಜೆಯಲ್ಲಿ ಶಿವನಿಗೆ ನಾನಾ ಪರಿಮಳ ಪುಷ್ಪಗಳ ಅರ್ಚನೆ , ಬಿಲ್ವಾರ್ಚನೆ , ಶತರುದ್ರಾಭಿಷೇಕ ಮತ್ತು ಕೊನೆಯಲ್ಲಿ ಭಸ್ಮಾರ್ಚನೆ ಮಾಡುವ ಮೂಲಕ ನಾಲ್ಕು ಜಾವದ ಜಾಗರಣೆ ಮಾಡಿ ಶಿವನ ಕೃಪೆಗೆ ಪಾತ್ರರಾದರು.
ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಶಿವ ಭಕ್ತರು ‘ಓಂ ರೀಮ್ ಶಿವಾಯ’ ಎಂದು ಶಿವನಾಮ ಸ್ಮರಣೆ ಮಾಡಿದರು. ಇದೇ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ಪೂಜೆ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಪೂಜೆಯನ್ನು ಅವಧೂತರು ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮುಂಬರುವ ದಿನಗಳಲ್ಲಿ ಮಳೆ ಬೆಳೆಯಾಗಿ ಸುಭೀಕ್ಷೆ ನೆಲೆಸಲಿ ಎಂದು ಸಂಕಲ್ಪ ಮಾಡಿದರು. ಅವಧೂತರು ಭಕ್ತರಿಗೆ ಭಸ್ಮ ಪ್ರಸಾದ , ಪುಷ್ಪ ಪ್ರಸಾದವನ್ನು ನೀಡಿ ಆಶೀರ್ವದಿಸಿದರು. ಬಳಿಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.