ಮಡಿಕೇರಿ: ನ೧೧ ರಂದು ಕನಕದಾಸರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ನಿದರ್ಶನ ನೀಡಿದರು.
ನ೧೧ ರಂದು ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಮಾತನಾಡಿದರು.
ಭಕ್ತ ಕನಕದಾಸರ ಜಿಲ್ಲಾ ಮಟ್ಟದ ಜಯಂತಿ ಕಾರ್ಯಕ್ರಮವನ್ನು ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಭಕ್ತ ಕನಕದಾಸರ ಜಯಂತಿಯನ್ನು ಶಿಷ್ಟಾಚಾರದಂತೆ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ವತಿಯಿಂದ ಶಿಷ್ಟಾಚಾರದಂತೆ ಆಹ್ವಾನ ಪತ್ರ, ಭಕ್ತ ಕನಕದಾಸರ ಕುರಿತು ಕೀರ್ತನೆಗಳ ಗೀತಾಗಾಯನ ಏರ್ಪಡಿಸಲಾಗುವುದು. ಕೊಡಗು ಜಿಲ್ಲೆಯವರನ್ನು ಮುಖ್ಯ ಭಾಷಣಕಾರರನ್ನಾಗಿ ಆಹ್ವಾನಿಸುವುದು, ಮತ್ತಿತರ ಬಗ್ಗೆ ಸಮಾಜದ ಮುಖ್ಯಸ್ಥರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಸಂಗೋಳ್ಳಿ ರಾಯಣ್ಣ ಕುರುಬರ ಸಮಾಜದ ವೇದಿಕೆ ಅಧ್ಯಕ್ಷ ಡಿ.ಆರ್.ಪ್ರಭಾಕರ್ ಮಾತನಾಡಿ, ಭಕ್ತ ಕನಕದಾಸ ಜಯಂತಿಯನ್ನು ಕುಶಾಲನಗರದಲ್ಲಿ ಆಚರಿಸಲು ಅವಕಾಶ ಮಾಡಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಆದಿವಾಸಿ ಮಕ್ಕಳಿಗೆ ನೋಟು ಪುಸ್ತಕ ವಿತರಿಸಲಾಗುವುದು. ಸುಮಾರು ೨೦೦ ಮಂದಿಯನ್ನು ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಣಜೂರು ಮಂಜುನಾಥ್‌ರವರು ಕನಕದಾಸ ಜಯಂತಿ ಸಿದ್ಧತೆ ಸಂಬಂಧ ಹಲವು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆಯ ಉಪಾಧ್ಯಕ್ಷರಾದ ಮಂಜುನಾಥ್, ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಆರ್.ರವಿ, ನಿರ್ದೇಶಕ ಭರಮಣ್ಣ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ, ಹಾಲುಮತ ಮಹಾಸಭಾ ವೇದಿಕೆಯ ಅಧ್ಯಕ್ಷ ರವಿಗೌಡ, ಪ್ರಧಾನ ಕಾರ್ಯದರ್ಶಿ ವಿ.ಆರ್.ನಾಗರಾಜು, ಇತರರು ಇದ್ದರು.