ಗುಂಡ್ಲುಪೇಟೆ : ಪಟ್ಟಣ ಹಾಗೂ ತಾಲೂಕಿನಾದ್ಯಂತ ಗೌರಿ, ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಶುಕ್ರವಾದ ಸ್ವರ್ಣಗೌರಿ ಹಬ್ಬವನ್ನು ಮುತ್ತೈದೆಯರು ಹಾಗೂ ಮಕ್ಕಳು ಶ್ರದ್ಧ ಭಕ್ತಿಯಿಂದ ಆಚರಿಸಿದರು.
ಪಟ್ಟಣದ ವಿವಿಧ ಭಾಗಗಳಲ್ಲಿ ಮತ್ತು ದೇವಾಲಯಗಳಲ್ಲಿ ತರಕಾರಿ, ಹಣ್ಣು ಹಾಗೂ ತಳಿರು ತೋರಣಗಳಿಂದ ಗೌರಿ ಗುಡಿಯನ್ನು ಸಿಂಗಾರ ಮಾಡಲಾಗಿತ್ತು. ಸ್ವರ್ಣ ಗೌರಿಗೆ ಹೂವು, ಹಣ್ಣು, ಬಳೆ, ನೈವೇದ್ಯ ಅರ್ಪಿಸಲಾಯಿತು. ಬಾಗಿನ ಸಮರ್ಪಿಸುವುದರೊಂದಿಗೆ ಗೌರಿ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಗೌರಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಪ್ರಧಾನ ಅರ್ಚಕ ನಾಗರಾಜಸ್ವಾಮಿ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿದ್ದ ಗೌರಿ ಗುಡಿಯಲ್ಲಿ ಸಾಲಿನಲ್ಲಿ ನಿಂತು ಸುಮಂಗಲಿಯರು ಗೌರಿಗೆ ಪೂಜೆ ಸಲ್ಲಿಸಿದರು. ಇದಲ್ಲದೆ ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಸ್ವರ್ಣಗೌರಿ ಪ್ರತಿಷ್ಟಾಪನೆ ಮಾಡಲಾಗಿತ್ತು. ನೂರಾರು ಮಹಿಳೆಯರು ಸ್ವರ್ಣ ಗೌರಿಗೆ ಬಾಗಿನ ಸಲ್ಲಿಸಿ ಎಳೆಕಟ್ಟಿಸಿಕೊಂಡರು.
ಗಣೇಶ ಹಬ್ಬಕ್ಕೆ ಖರೀದಿ ಭರಾಟೆ: ಒಂದೆಡೆ ಮಹಿಳೆಯರು ಸ್ವರ್ಣಗೌರಿ ಹಬ್ಬದ ಆಚರಣೆಯಲ್ಲಿ ನಿರತರಾಗಿದ್ದರೆ ಯುವಕರು ಮತ್ತು ಮಕ್ಕಳು ಗಣೇಶ ಹಬ್ಬದ ಆಚರಣೆಗೆ ಭರದಿಂದ ಸಿದ್ಧತೆ ನಡೆಸಿದ್ದರು. ಎಲ್ಲಿ ನೋಡಿದರೂ ಗಣೇಶ ಮೂರ್ತಿಗಳ ಖರೀದಿ, ಗಣೇಶ ಪ್ರತಿಷ್ಟಾಪನೆಗೆ ಅಗತ್ಯವಾದ ಹಣ್ಣುಗಳು, ಮಂಟಪ ಅಲಂಕರಿಸಲು ಕಬ್ಬು, ಬಾಳೆಕಂದು, ಮಾವಿನ ಸೊಪ್ಪುಗಳ ಸಂಗ್ರಹದಲ್ಲಿ ತೊಡಗಿಸಿಕೊಂಡರು. ಇದರಿಂದ ಪಟ್ಟಣದ ಅಂಗಡಿ ಬೀದಿಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.