ಜಿಲ್ಲೆ

ಗೋಹತ್ಯೆಮುಕ್ತ ಬಕ್ರೀದ್ ಆಚರಿಸಿರಿ:* ಮುಸ್ಲಿಂ ಸಮುದಾಯಕ್ಕೆ ದಯಾನಂದ ಸ್ವಾಮೀಜಿ ಮನವಿ

ಬೆಂಗಳೂರು: ಮುಂಬರುವ ಬಕ್ರೀದ್ ಹಬ್ಬವನ್ನು ಗೋ ಸಹಿತ ಜಾನುವಾರು, ಒಂಟೆಗಳ ಹತ್ಯೆ ಮಾಡದೆ ಅಹಿಂಸಾತ್ಮಕವಾಗಿ ಆಚರಿಸುವಂತೆ ಮುಸ್ಲಿಂ ಸಮುದಾಯಕ್ಕೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಧಾರ್ಮಿಕ ಆಚರಣೆಯಲ್ಲಿ ಹಸು, ಎತ್ತು ಇತ್ಯಾದಿ ಗೋವಂಶದ ಜಾನುವಾರು ಹತ್ಯೆ ಮಾಡುವುದನ್ನು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಅಧಿನಿಯಮ -2020’ ನಿಷೇಧಿಸುತ್ತದೆ. ಈ ಕಾಯ್ದ ಉಲ್ಲಂಸುವವರಿಗೆ 3-7 ವರ್ಷ ಜೈಲುಶಿಕ್ಷೆ ಮತ್ತು 50 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಜತೆಗೆ ಜಾನುವಾರುಗಳ ಅಕ್ರಮ ಸಾಗಣೆ, ಹತ್ಯೆಯೂ ಶಿಕ್ಷಾರ್ಹ ಅಪರಾಧವಾಗಿದೆ. ಹಾಗಾಗಿ ಬ್ರಕೀದ್ ವೇಳೆ ಒಂಟೆ, ಗೋವುಗಳನ್ನು ಹತ್ಯೆ ಮಾಡುವುದು ಸರ್ಕಾರ ತಡೆಯಬೇಕು. ಜತೆಗೆ ಮುಸ್ಲೀಮರು ಗೋವಧೆ ಮಾಡದೆ ಅಹಿಂಸಾತ್ಮಕವಾಗಿ ಹಬ್ಬ ಆಚರಿಸಬಹುದು ಎಂದು ಒತ್ತಾಯಿಸಿದರು.

ಬಕ್ರೀದ್ ವೇಳೆ ಗೋ ಸಹಿತ ಜಾನುವಾರು ಹತ್ಯೆ ಅನಿವಾರ್ಯ ಅಲ್ಲ ಎಂಬುದನ್ನು ಕುರಾನ್ ಉಲ್ಲೇಖಿಸಿ ಆದೇಶ ನೀಡಿದೆ. ಈ ಹಿಂದೆ ಭಾರತವನ್ನಾಳಿದ್ದ ಮೊಘಲ್, ಸುಲ್ತಾನರು ಹಾಗೂ ನವಾಬರ ಆಳ್ವಿಕೆ ವೇಳೆ ಗೋಹತ್ಯೆ ನಿಷೇಧಿಸಲಾಗಿತ್ತು. ಹಾಗಾಗಿ ಬಕ್ರೀದ್ ಸಂದರ್ಭದಲ್ಲಿ ಜಾನುವಾರು ಹತ್ಯೆ ಮಾಡಬಾರದು ಎಂದು ಅವರು ವಿನಂತಿಸಿದರು.

ವಧೆಗಾಗಿ ಜಾನುವಾರು ಮಾರಾಟ ಬೇಡ:

ಜಾನುವಾರು ಹತ್ಯೆಗೆ ಮುಸ್ಲೀಮರಷ್ಟೇ ಹಿಂದು ಸಹಿತ ಇತರ ಧರ್ಮೀಯ ಕೃಷಿಕರು, ಪಶುಪಾಲಕರೂ ಕಾರಣರಾಗಿದ್ದಾರೆ. ಹೈನುಗಾರಿಕೆ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಗೋ ಸಹಿತ ಜಾನುವಾರು ರೈತರಿಗೆ ಆಸರೆಯಾಗಿದೆ. ಗೋವುಗಳಿಗೆ ವಯಸ್ಸಾಯಿತೆಂದು, ನಿಷ್ಪ್ರಯೋಜಕ ಎಂದು ಭಾವಿಸಿ ಅವುಗಳನ್ನು ಕೊಲ್ಲಲು ಕಟುಕರಿಗೆ ಮಾರಾಟ ಮಾಡುವುದು ಸರಿಯಲ್ಲ. ಬದಲಾಗಿ ಅವುಗಳನ್ನು ರಕ್ಷಣೆ ಮಾಡುವ ಉದಾರತೆ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ವಿವರಿಸಿದರು.