ಕಿಕ್ಕೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪಟಾಕಿ ಬಿಡಿ ಪರಿಸರ ಉಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಪರಿಸರ ಉಳಿಸಲು ಪ್ರತಿಜ್ಞೆ ಮಾಡಲಾಯಿತು. ಟ್ರಸ್ಟಿ ತ್ರಿವೇಣಿ, ಸಾಮಾಜಿಕ ಕಾರ್ಯಕರ್ತೆ ಕವಿತಾ ಇದ್ದರು. 
ಜಿಲ್ಲೆ

ದೀಪ ಹಚ್ಚಿ ಆರೋಗ್ಯಕರ ದೀಪಾವಳಿ ಆಚರಿಸಿ

ಕಿಕ್ಕೇರಿ: ಪರಿಸರಕ್ಕೆ ವಿಷಾನಿಲ ಸೂಸುವ ಪಟಾಕಿಯನ್ನು ಸುಡದೆ ಸಿಹಿ ಹಂಚಿ, ಹೊಸ ಉಡುಗೆ ತೊಟ್ಟು ದೀಪ ಹಚ್ಚಿ ಸಂಭ್ರಮಿಸುವ ಮೂಲಕ ಆರೋಗ್ಯಕರ ದೀಪಾವಳಿ ಆಚರಣೆ ಮಾಡಬೇಕು ಎಂದು ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ಹೇಳಿದರು.

ಇಲ್ಲಿನ ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘ ಗುರುವಾರ ಆಯೋಜಿಸಿದ್ದ ‘ಪಟಾಕಿ ಬಿಡಿ, ಪರಿಸರ ಉಳಿಸಿ’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೀಪಾವಳಿ ಕತ್ತಲಿನಿಂದ ದೂರಸರಿಸುವ ಬದಲು ಜೀವನವನ್ನೇ ಕತ್ತಲು ಮಾಡುವ ಪಟಾಕಿಯಿಂದ ದೂರ ಇರಬೇಕು. ಈಗಾಗಲೇ ಪರಿಸರ ಮಾಲಿನವಾಗಿದೆ. ಮತ್ತಷ್ಟು ಹಾಳು ಮಾಡುವುದು ಬೇಡ ಎಂದು ಸಲಹೆ ನೀಡಿದರು.

ಪಟಾಕಿ ಸುಡುವುದರಿಂದ ಅದರಲ್ಲಿನ ಹಾನಿಕಾರಕ ವಿಷ ವಸ್ತುಗಳು ಪರಿಸರಕ್ಕೆ ಸೇರಲಿವೆ. ಇದರಿಂದ ಚರ್ಮವ್ಯಾಧಿ, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌ನಂತಹ ಹಲವು ಕಾಯಿಲೆಗಳನ್ನು ದುಡ್ಡು ಕೊಟ್ಟು ನಾವೇ ಪಡೆದುಕೊಳ್ಳುವಂತಾಗಲಿದೆ. ವಿಷಕಾರಕ ವಸ್ತು ನೇರವಾಗಿ ಶ್ವಾಸಕೋಶಕ್ಕೆ ಸೇರುವುದರಿಂದ ತೀವ್ರ ಉಸಿರಾಟ ತೊಂದರೆಯಾಗಲಿದೆ ಎಂದು ಹೇಳಿದರು.

ಬೆಳಕಿನ ಹಬ್ಬ ಪ್ರಾಣಿ, ಪಕ್ಷಿಗಳಿಗೆ ಕಂಟಕವಾಗಿದೆ. ಹಾಗಾಗಿ ಮಕ್ಕಳು ಹಠ ಮಾಡದೆ ಪಟಾಕಿ ಸುಡುವುದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಸೇವಾಕರ್ತೆ ಕವಿತಾ ಮಾತನಾಡಿದರು. ಮಕ್ಕಳು ಪಟಾಕಿ ಹಾನಿ ಕುರಿತು ಮಾಹಿತಿ ಪಡೆದುಕೊಂಡು ಭಾರಿ ಶಬ್ದದ ಪಟಾಕಿ ಸುಡುವುದು ಇಲ್ಲ. ಸಣ್ಣ ಪಟಾಕಿಯನ್ನು ಕಡಿಮೆ ಪ್ರಮಾಣದಲ್ಲಿ ಸುಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.