ಜಿಲ್ಲೆ

ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಸಿಸಿ ಕ್ಯಾಮರಾ ಅಳವಡಿಕೆ

Mysuru - Desk - Ravikumar

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಹೆಚ್ಚುತ್ತಿದ್ದ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಿರುವ ಸ್ಥಳೀಯ ಗ್ರಾಮ ಪಂಚಾಯಿತಿ, ಇದೀಗ ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಪೊಲೀಸರು ರಾತ್ರಿ ಗಸ್ತು ನಡೆಸುತ್ತಿದ್ದರೂ ಮನೆಗಳ್ಳತನ ಹಾಗೂ ಮಹಿಳೆಯರ ಚಿನ್ನದ ಸರ ಕಿತ್ತು ಪರಾರಿಯಾಗುವ ಪ್ರಕರಣಗಳು ಹೆಚ್ಚಾಗಿದ್ದವು. ಇವುಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯಿತಿ 35,000 ರೂ. ವೆಚ್ಚದಲ್ಲಿ 6 ಸಿಸಿ ಕ್ಯಾಮರಾ ಅಳವಡಿಸಿದೆ.

ಗ್ರಾಮದ ಮುಖ್ಯರಸ್ತೆಯಲ್ಲಿರುವ ಆಟೋ ನಿಲ್ದಾಣ, ಮತ್ತೊಂದು ತುದಿಯಲ್ಲಿರುವ ಲಕ್ಷ್ಮೀವರದರಾಜಸ್ವಾಮಿ ದೇವಾಲಯ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ 360 ಡಿಗ್ರಿ ದೃಶ್ಯಗಳನ್ನು ಸೆರೆಹಿಡಿಯುವ 3 ತಿಂಗಳ ದತ್ತಾಂಶ ಸಂಗ್ರಹ ಸಾಮರ್ಥ್ಯದ ಡಿವಿಆರ್‌ಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಗ್ರಾಮ ಪಂಚಾಯಿತಿ ಮತ್ತು ಮತ್ತು ಪೊಲೀಸ್ ಠಾಣೆಗಳಲ್ಲಿ ನಿರ್ವಹಿಸಲು ಸಾಧ್ಯವಾಗುವಂತೆ ಮಾಡಲಾಗಿದೆ ಎಂದು ಪಿಡಿಒ ಮಹದೇವಸ್ವಾಮಿ ತಿಳಿಸಿದ್ದಾರೆ.