ಜಿಲ್ಲೆ

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ: ತೋಟಕ್ಕೆ ತೆರಳಲು ಹೆದರುತ್ತಿರುವ ರೈತರು; ಬೋನು ಇಟ್ಟ ಅರಣ್ಯ ಇಲಾಖೆ

ಚನ್ನಗಿರಿ: ತಾಲೂಕಿನ ಕಂಚಿಗನಾಳು ಗ್ರಾಮದ ಸುತ್ತಮುತ್ತಲಿನ ಅಡಕೆ ತೋಟಗಳಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹೊಸಳ್ಳಿ ಕುಮಾರ ಎಂಬುವವರ ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟದ ದೃಶ್ಯವು ಸೆರೆಯಾಗಿದ್ದು, ಗ್ರಾಮಸ್ಥರು ತೋಟದ ಕಡೆಗೆ ಹೋಗಲು ಹೆದರುತ್ತಿದ್ದಾರೆ. ಕಳೆದ ಒಂದು ವಾರದಿಂದ ಮಳೆ ಕಡಿಮೆಯಾದ ಕಾರಣ ಭಾನುವಾರ ತೋಟ ಪರಿಶೀಲಿಸಲು ಹೋದಾಗ, ಸಿಸಿ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯ ಸೆರೆಯಾಗಿರುವುದು ತಿಳಿದು ಬಂದಿದೆ. ಕಳೆದ ಒಂದು ವಾರದಲ್ಲಿ ಚಿರತೆಗಳು ಗ್ರಾಮದ ಕಡೆಗೆ ಆಗಮಿಸುತ್ತಿದ್ದು, ಬೀದಿಯಲ್ಲಿ ಮಲಗಿದ್ದ ನಾಯಿಯನ್ನು ಕಚ್ಚಿಕೊಂಡು ಹೋಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಲೂಕಿನಾದ್ಯಂತ ಚಿರತೆ ಕಾಟ ಹೆಚ್ಚಳ

ಕಳೆದ ನಾಲ್ಕು ವರ್ಷಗಳಿಂದಲೂ ಅರಣ್ಯ ಪ್ರದೇಶದ ಹತ್ತಿರವಿರುವ ಗ್ರಾಮಗಳಲ್ಲಿ ಚಿರತೆಗಳ ಕಾಟ ಅಧಿಕವಾಗಿದೆ. ಅರಣ್ಯ ಇಲಾಖೆ ಇದುವರೆಗೆ 3 ಚಿರತೆಗಳನ್ನು ಹಿಡಿದು ದೂರದ ಅರಣ್ಯಕ್ಕೆ ಬಿಟ್ಟಿದ್ದರೂ, ಈ ಕಾಟ ನಿಂತಿಲ್ಲ.

ತಾಲೂಕಿನ ಹಲವು ಗ್ರಾಮಗಳಲ್ಲಿ ಪ್ರತಿದಿನ ಚಿರತೆ ಕಾಣಿಸುತ್ತಿದೆ. ಈ ಗ್ರಾಮಗಳಲ್ಲಿ ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳ ಪೋಷಕರು ಬೆಳಿಗ್ಗೆ ಮತ್ತು ಸಂಜೆ ನಿಲ್ದಾಣದಲ್ಲಿ ಕಾದು ಮಕ್ಕಳನ್ನು ಕರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ವಾಹನಗಳು ಸಹ ಮಕ್ಕಳನ್ನು ಮನೆಯ ಬಳಿಯೇ ಕರೆತಂದು ಬಿಡುತ್ತಿವೆ.

ಚಿರತೆ ಕಾಣಿಸಿಕೊಳ್ಳುತ್ತಿರುವ ಪ್ರಮುಖ ಗ್ರಾಮಗಳು
ದೇವರಹಹಳ್ಳಿ ವಿ.ರಾಮೇನಹಳ್ಳಿ
ಹೊನ್ನನಾಯಕನಹಳ್ಳಿ ಹೊದಿಗೆರೆ
ವಡ್ನಾಳ್ ಗೊಪ್ಪೇನಹಳ್ಳಿ
ಗೊಲ್ಲರಹಳ್ಳಿ ಕಂಚಿಗನಾಳು
ಮಲಹಾಳು ಕಲ್ಕೆರೆ
ತಾವರೆಕೆರೆ

ಅರಣ್ಯ ಇಲಾಖೆಯ ಕ್ರಮ ಮತ್ತು ಎಚ್ಚರಿಕೆ

ಹಲವು ಗ್ರಾಮಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.

  • ಬೋನು ವ್ಯವಸ್ಥೆ: ಹೆಚ್ಚು ಚಿರತೆ ಓಡಾಟ ಇರುವ ಕಡೆಗಳಲ್ಲಿ ಇಲಾಖೆಯವರು ಬೋನುಗಳನ್ನು ಇರಿಸಿದ್ದಾರೆ.
  • ಪಟಾಕಿ ಬಳಕೆ: ರಾತ್ರಿ ಸಮಯದಲ್ಲಿ ಚಿರತೆ ಕಂಡುಬಂದಲ್ಲಿ ಪಟಾಕಿ ಸಿಡಿಸಲು ಗ್ರಾಮಸ್ಥರಿಗೆ ಸೂಚಿಸಲಾಗಿದೆ.

ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್. ಶ್ವೇತಾ ಅವರು ಪ್ರತಿಕ್ರಿಯಿಸಿ, "ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುವುದು ಸಹಜ. ಆದರೆ ಅವು ಮನುಷ್ಯರನ್ನು ಕಂಡರೆ ಭಯ ಪಡುತ್ತವೆ. ಜನರು ಎಚ್ಚರದಿಂದ ಇರಬೇಕು," ಎಂದು ತಿಳಿಸಿದ್ದಾರೆ.

"ಇಲಾಖೆಯಿಂದ ಚಿರತೆ ಹಿಡಿಯಲು ಕ್ರಮ ತೆಗೆದುಕೊಳ್ಳಲಾಗಿದೆ. ಸಂಜೆಯ ನಂತರ ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ತಿರುಗಾಡಬಾರದು," ಎಂದು ಅವರು ಮನವಿ ಮಾಡಿದ್ದಾರೆ.