ಹುಬ್ಬಳ್ಳಿ : ತಮಿಳುನಾಡಿನ ಕದ್ದಲೂರೆ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಶಾಲಾ ವ್ಯಾನ್ಗೆ ರೈಲು ಡಿಕ್ಕಿ ಹೊಡೆದು ಮೂವರು ಬಾಲಕರು ಮೃತಪಟ್ಟಿರುವ ನಂತರ ಎಚ್ಚೆತ್ತಿರುವ ರೈಲ್ವೆ ಇಲಾಖೆ, ದೇಶಾದ್ಯಂತ ಮಾನವಸಹಿತ ಲೆವೆಲ್ ಕ್ರಾಸ್ಸಿಂಗ್ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಮುಂದಾಗಿದೆ.
ಈ ಅಪಘಾತದ ನಂತರ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ಹೆಚ್ಚು ರೈಲುಗಳ ಸಂಚಾರ ಇರುವ ಹೊಸಪೇಟೆಯ ಮಾನವಸಹಿತ ಲೆವೆಲ್ ನಾನ್ ಇಂಟರ್ ಲಾಕ್ಡ ಲೆವೆಲ್ ಕ್ರಾಸ್ಸಿಂಗ್ನಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಯಿತು.
ಈ ಕಾರ್ಯದಿಂದ ರೈಲು ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾ ಮೂಲಕ ಕ್ರಾಸಿಂಗ್ನ ದೃಶ್ಯ ವೀಕ್ಷಿಸಿ, ರೈಲು ಸಂಚಾರಕ್ಕೆ ಸಿಗ್ನಲ್ ನೀಡಲು ಅನುಕೂಲವಾಯಿತು. ಹೊಸಪೇಟೆಯ ಮಾನವಸಹಿತ ಲೆವೆಲ್ ನಾನ್ ಇಂಟರ್ ಲಾಕ್ಡ ಲೆವೆಲ್ ಕ್ರಾಸ್ಸಿಂಗ್ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ಕಾರ್ಯ ಯಶಸ್ಸಾಗುತ್ತಿದ್ದಂತೆಯೇ ಇಡೀ ದೇಶದಲ್ಲಿ ಈ ಮಾದರಿ ಅಳವಡಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.
ಪ್ರತಿಯೊಂದು ಮಾನವಸಹಿತ ನಾನ್ಇಂಟರ್ಲಾಕ್ಡ್ ಎಲ್ಸಿ ಗೇಟ್ನಲ್ಲಿ ಈಗ ಕನಿಷ್ಠ ಎರಡು ಐಪಿ ಸಕ್ರಿಯ ಸಿಸಿಟಿವಿ ಕ್ಯಾಮೆರಾಗಳು (ಪ್ರತಿ ಬದಿಗೆ ಒಂದು) ನೆಟ್ವರ್ಕ್ ವಿಡಿಯೋ ರೆಕಾರ್ಡರ್ಗಳು, ತಡೆರಹಿತ ವಿದ್ಯುತ್ ಸರಬರಾಜು ವ್ಯವಸ್ಥೆಗಳು ಮತ್ತು ಸೌರ ಫಲಕಗಳಂತಹ ಮೂಲಸೌಕರ್ಯಗಳನ್ನು ಹೊಂದಿವೆ.
ಈ ನೈಜ ಸಮಯದ ವೀಡಿಯೋ ಫೀಡ್ಗಳಿಗೆ ಸ್ಟೇಷನ್ ಮಾಸ್ಟರ್ಗಳು ಹಾಗೂ ಇಂಜಿನಿಯರಿಂಗ್ ನಿಯಂತ್ರಣದವರು ಪ್ರತ್ಯಕ್ಷ ವೀಕ್ಷಣೆಗೆ ಸಹಾಯವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಮುಕುಲ್ ಸರಣ ಮಾಥುರ್, ಲೆವೆಲ್ ಕ್ರಾಸಿಂಗ್ಗಳಲ್ಲಿ ಸಿಸಿಟಿವಿ ಅಳವಡಿಕೆ ಒಂದು ಗೇಮ್ಚೇಂಜರ್ ಆಗಿದ್ದು, ಇದು ಸ್ಟೇಷನ್ ಮಾಸ್ಟರ್ಗಳಿಗೆ ಗೇಟ್ ಕಾರ್ಯುಚರಣೆಯ ನೇರ ಮೇಲ್ವಿಚಾರಣೆಯೆಂಬ ಅಮೂಲ್ಯ ಸಾಧನವನ್ನು ಒದಗಿಸುತ್ತದೆ ಮತ್ತು ರೈಲು ಸಂಚಾರವನ್ನು ತೊಂದರೆ ಇಲ್ಲದೇ ನಿರ್ವಹಿಸಲು ನೆರವಾಗುತ್ತದೆ. ಇದು ರಸ್ತೆ ಹಾಗೂ ರೈಲು ಬಳಕೆದಾರರಿಬ್ಬರಿಗೂ ಲಾಭದಾಯಕವಾಗಿದೆ ಎಂದಿದ್ದಾರೆ.