ಸಾಂದರ್ಭಿಕ ಚಿತ್ರ  
ಜಿಲ್ಲೆ

ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ: 65 ಮಂದಿ ಬಂಧನ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ನಗರದ ಹೋಟೆಲ್​ನಲ್ಲಿ ಜೂಜಾಡುತ್ತಿದ್ದ 65 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 80 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

ಆಂಧ್ರ ಪ್ರದೇಶದ ಕಡಪ ಮೂಲದ ಶಶಿಕುಮಾರ್ ಮಹದೇವಪುರದ ಬೆಂಗಳೂರು ಇನ್ ಹೋಟೆಲ್​ನಲ್ಲಿ ಆಯೋಜಿಸಿದ್ದ. ತನ್ನ ಊರಿನಿಂದ ಜೂಜು ಕೋರರನ್ನು ಕರೆತಂದು ಇಸ್ಪೀಟ್ ಆಡಿಸುತ್ತಿದ್ದ. ಈ ಬಗ್ಗೆ ಮಾಹಿತಿ ಆಧರಿಸಿ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಭಾನುವಾರ ಸಂಜೆ ದಾಳಿ ನಡೆಸಿದಾಗ ಜೂಜಾಡುತ್ತಿದ್ದ ಗ್ಯಾಂಗ್ ಸಿಕ್ಕಿಬಿದ್ದಿದೆ.

ಜೂಜುಕೋರರಿಂದ 80 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಈ ಕುರಿತು ಹೋಟೆಲ್ ಮಾಲೀಕ ರಾಜೇಶ್, ಮ್ಯಾನೇಜರ್, ಜೂಜು ಆಡಿಸುತ್ತಿದ್ದ ಶಶಿಕುಮಾರ್ ಹಾಗೂ 65 ಜೂಜುಕೋರರ ವಿರುದ್ಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆಂಧ್ರದಿಂದ ಬಂದು ಜೂಜು: ಕಳೆದ ಒಂದು ವಾರದಿಂದ ಬೆಂಗಳೂರು ಇನ್ ಹೋಟೆಲ್​ನಲ್ಲಿ ಶಶಿ ಜೂಜು ಅಡ್ಡೆ ಆರಂಭಿಸಿದ್ದ. ಜೂಜಾಡಲು ಆಂಧ್ರದಿಂದ ಜನ ಬರುತ್ತಿದ್ದರು. ಸಿಕ್ಕಿಬಿದ್ದ 65 ಜನರ ಪೈಕಿ 62 ಮಂದಿ ಆಂಧ್ರಪ್ರದೇಶವರಾಗಿದ್ದಾರೆ. ಜೂಜಾಡಲು ಐಷಾರಾಮಿ ಕಾರುಗಳಲ್ಲಿ ಲಕ್ಷಾಂತರ ರೂ. ತರುತ್ತಿದ್ದರು. ಪೊಲೀಸ್ ದಾಳಿ ಭೀತಿಯಿಂದ ಕಾರುಗಳನ್ನು ಬೇರೆಡೆ ನಿಲ್ಲಿಸಿ, ಸ್ವಲ್ಪ ಹಣವನ್ನು ಮಾತ್ರ ಅಡ್ಡೆಗೆ ತಂದು, ಉಳಿದಿದ್ದನ್ನು ಕಾರಿನಲ್ಲಿಟ್ಟು ಬರುತ್ತಿದ್ದರು. ಕೆಲ ಕಾರುಗಳನ್ನು ಪರಿಶೀಲಿಸಿದಾಗ 10 ಲಕ್ಷ ರೂ. ಪತ್ತೆಯಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.