ಜಿಲ್ಲೆ

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಪೊಲೀಸ್​ನೆರವು ಮೊಬೈಲ್ ಆಪ್ ಅಭಿವೃದ್ಧಿ, ಪೊಲೀಸ್ ಸಹಾಯವಾಣಿಗೆ ಸಂದೇಶ ನೀಡುವ ಪ್ಯಾನಿಕ್ ಬಟನ್

malli

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಕ್ರಮ ಕೈಗೊಳ್ಳುತ್ತಿರುವ ಬಿಎಂಟಿಸಿ, ಅದಕ್ಕೆ ಪೊಲೀಸ್ ಇಲಾಖೆ ನೆರವು ಪಡೆಯುತ್ತಿದೆ. ಪ್ರಮುಖವಾಗಿ ಮಹಿಳಾ ಪ್ರಯಾಣಿಕರು ಪೊಲೀಸ್ ಇಲಾಖೆಯನ್ನು ಸುಲಭವಾಗಿ ಸಂರ್ಪಸುವಂತಾಗಲು ಮೊಬೈಲ್ ಆಪ್, ಬಸ್​ಗಳಲ್ಲಿ ಪ್ಯಾನಿಕ್ ಬಟನ್​ಗಳನ್ನು ಅಳವಡಿಸಲಾಗುತ್ತಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಭಯಾ ಯೋಜನೆ ಅಡಿಯಲ್ಲಿ ರಾಜ್ಯದ ವಿವಿಧ ಇಲಾಖೆಗೆ ಅನುದಾನ ನೀಡು ತ್ತಿದೆ. ಅದರಂತೆ ಬಿಎಂಟಿಸಿಗೂ ಅನುದಾನ ನೀಡಲಾಗಿದ್ದು, 2016- 17ರಿಂದ ಈವರೆಗೆ 33.64 ಕೋಟಿ ರೂ. ನಿರ್ಭಯಾ ಅನುದಾನ ನೀಡಲಾಗಿದೆ. ಈವರೆಗೆ 2.37 ಕೋಟಿ ರೂ. ಮಾತ್ರ ವ್ಯಯಿಸಲಾಗಿದೆ. ಉಳಿದ 31.27 ಕೋಟಿ ರೂ. ಬಿಎಂಟಿಸಿಯಲ್ಲಿಯೇ ಉಳಿದಿದೆ. ಆ ಹಣವನ್ನು ಖರ್ಚು ಮಾಡಲು ಹಲವು ಯೋಜನೆಗಳನ್ನು ರೂಪಿಸಿದೆ.

ವಿಶೇಷ ಆಪ್: ಪ್ರಮುಖವಾಗಿ ಬಿಎಂಟಿಸಿ, ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ಹೊಸ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸುತ್ತಿದೆ. ಆ ಮೊಬೈಲ್ ಅಪ್ಲಿಕೇಷನ್ ಪೊಲೀಸ್ ಇಲಾಖೆ ಮಹಿಳೆಯರಿಗಾಗಿ ಮೀಸಲಿಟ್ಟಿರುವ ಸುರಕ್ಷಾ ಆಪ್ ಜತೆಗೆ ಸಂಪರ್ಕ ಹೊಂದಿರಲಿದೆ. ಬಿಎಂಟಿಸಿ ಆಪ್​ನಲ್ಲಿ ದೂರು ದಾಖಲಾದರೆ ಅದು ಸುರಕ್ಷಾ ಆಪ್​ನಲ್ಲೂ ನಮೂದಾಗಲಿದೆ. ಅದರ ಮೂಲಕ ಮಹಿಳಾ ಪ್ರಯಾಣಿಕರಿಗೆ ಕಿರಕುಳ ನೀಡಿದವರ ವಿರುದ್ಧ ಬಿಎಂಟಿಸಿ ಜತೆಗೆ ಪೊಲೀಸ್ ಇಲಾಖೆ ಕೂಡ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ.

ಪ್ಯಾನಿಕ್ ಬಟನ್: ಮೊಬೈಲ್ ಆಪ್ ಜತೆಗೆ ಬಿಎಂಟಿಸಿ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಪ್ಯಾನಿಕ್ ಬಟನ್ ಅಳವಡಿ ಸಲು ಯೋಜನೆ ರೂಪಿಸಲಾಗಿದೆ. ಆ ಬಟನ್ ಪೊಲೀಸ್ ಇಲಾಖೆಯ ಸಹಾಯವಾಣಿಗೆ ಲಿಂಕ್ ಆಗಿರಲಿದೆ. ಪ್ಯಾನಿಕ್ ಬಟನ್ ಒತ್ತಿದರೆ ಪೊಲೀಸ್ ಇಲಾಖೆಯ ಸಹಾಯವಾಣಿ ಸಂರ್ಪಸಲಿದೆ. ಬಟನ್ ಒತ್ತಿದ ಬಸ್ ಎಲ್ಲಿದೆ ಎಂಬುದನ್ನು ಮೊಬೈಲ್ ಆಪ್ ಅಥವಾ ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲು ಬಿಎಂಟಿಸಿ ನಿರ್ಧರಿಸಿದೆ.

ವಿಶ್ರಾಂತಿ ಕೊಠಡಿ

ಸಿಲಿಕಾನ್​ಸಿಟಿಯ ಪ್ರಮುಖ 14 ಬಸ್ ನಿಲ್ದಾಣಗಳಲ್ಲಿ 2.25 ಕೋಟಿ ರೂ.ಗಳನ್ನು ವ್ಯಯಿಸಿ ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಗೃಹ ನಿರ್ವಣಕ್ಕೆ ಯೋಜನೆ ರೂಪಿಸಲಾಗಿದೆ. ಮೊದಲಿಗೆ 15 ಬಸ್ ನಿಲ್ದಾಣಗಳಲ್ಲಿ ವಿಶ್ರಾಂತಿ ಗೃಹ ಸ್ಥಾಪನೆಗೆ ನಿರ್ಧರಿಸಲಾಗಿತ್ತು. ಆದರೆ, ಶಿವಾಜಿನಗರ ನಿಲ್ದಾಣದ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ವಿಶ್ರಾಂತಿ ಗೃಹ ಸ್ಥಾಪನೆ ಕಾರ್ಯವನ್ನು ಮುಂದೂಡಲಾಗಿದೆ. ಉಳಿದಂತೆ ಯಶವಂತಪುರ ಟಿಟಿಎಂಸಿ ಸೇರಿ 14 ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಕೊಠಡಿ ಲಭ್ಯವಾಗಿದೆ. ಅದರಲ್ಲಿ ಮಹಿಳೆಯರಿಗೆ ಕುಡಿಯುವ ನೀರಿನ ವ್ಯವಸ್ಥೆ, ಫೀಡಿಂಗ್ ಕೊಠಡಿ, ಚೇಂಜಿಂಗ್ ಕೊಠಡಿ, ಮಾಹಿತಿ ಪ್ರದರ್ಶನ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಶೌಚಗೃಹ, ವೈ-ಫೈ ಸೇವೆಗಳನ್ನು ನೀಡಲಾಗಿದೆ.

ಸಿಸಿ ಕ್ಯಾಮರಾಗಳ ಅಳವಡಿಕೆ

ಬಿಎಂಟಿಸಿ ಬಸ್​ಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆಗೂ ಯೋಜನೆ ರೂಪಿಸಲಾಗುತ್ತಿದೆ. ಅದರಂತೆ ಬಿಎಂಟಿಸಿಯ 1 ಸಾವಿರ ಬಸ್​ಗಳಲ್ಲಿ ಹೊಸದಾಗಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಅದು ಕೂಡ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳುವ ಕ್ರಮವಾಗಿದೆ. ಜತೆಗೆ ನಿರ್ಭಯ ಅನುದಾನವನ್ನು ಅದಕ್ಕೆ ಬಳಸಲಾಗುತ್ತಿದೆ.

| ಗಿರೀಶ್ ಗರಗ ಬೆಂಗಳೂರು