ಜಿಲ್ಲೆ

ಹೊಸಹಳ್ಳಿ ವ್ಯಾಪ್ತಿಯಲ್ಲಿ ಕಣ್ಗಾವಲು

ಶಿವರಾಜ.ಎಂ

 ವೆಂಕಟರಾಜು.ಎಸ್ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ತಾಲೂಕು ಹೊಸಹಳ್ಳಿ ಪೊಲೀಸ್ ಠಾಣೆಗೆ ಹೈಟೆಕ್ ಸ್ಪರ್ಶ ಲಭಿಸಿದೆ, ಠಾಣಾ ವ್ಯಾಪ್ತಿಯ ಹಳ್ಳಿಯಗಳ ಆಯಕಟ್ಟಿನ ಜಾಗದಲ್ಲಿ ಸೋಲಾರ್ ಆಧಾರಿತ 23 ಸಿಸಿ ಟಿವಿ ಕ್ಯಾಮರಾಗಳ ಕಣ್ಗಾವಲು ಆರಂಭವಾಗಿದೆ. ದಿನದ 24 ಗಂಟೆ ಕ್ಯಾಮರಾ ದೃಶ್ಯಾವಳಿಗಳ ಮಾನಿಟರ್ ನಡೆಯಲಿದ್ದು ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ಖಾಕಿಗೆ ಬಲ ಬಂದಂತಾಗಿದೆ.

ಬ್ಯಾಂಕ್ ದರೋಡೆಯಿಂದ ಹೈಲೈಟ್: ಸುಮಾರು 30 ವರ್ಷದ ಹಿಂದೆ ಸ್ಥಾಪನೆಯಾದ ಹೊಸಹಳ್ಳಿ ಪೊಲೀಸ್ ಠಾಣೆಗೆ ಮೂಲ ಸೌಕರ್ಯಗಳೇ ಇರಲಿಲ್ಲ. ಇದೀಗ ಸಿಸಿಟಿವಿ ಭಾಗ್ಯ ಬಂದಿದೆ. ತಾಲೂಕು ಕೇಂದ್ರದ 20 ಕಿ.ಮೀ. ದೂರದ ಹೊಸಹಳ್ಳಿಯಲ್ಲಿ ಠಾಣೆ ಇರುವ ಬಗ್ಗೆಯೇ ಅದೆಷ್ಟೋ ಜನರಿಗೆ ತಿಳಿದೆ ಇಲ್ಲ. ಆದರೆ ಇತ್ತೀಚೆಗೆ ಬ್ಯಾಂಕ್ ದರೋಡೆ ಬಳಿಕ ಹೊಸಹಳ್ಳಿ ಠಾಣೆ ಬೆಳಕಿಗೆ ಬಂದಿತ್ತು.

ನೆಲಕುಂಟೆಯಿಂದ ಬಂಕೆನಹಳ್ಳಿ: ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ನೆಲ್ಲುಕುಂಟೆಯಿಂದ ಆರೂಢಿ, ಬನವತಿವರೆಗೆ, ಲಿಂಗದವೀರನಹಳ್ಳಿಯಿಂದ ಬಂಕೆನಹಳ್ಳಿವರೆಗಿನ ವಿವಿಧ ಗ್ರಾಮಗಳ ಮುಖ್ಯ ರಸ್ತೆ, ವೃತ್ತ, ಶಾಲಾ ಆವರಣ, ಕವಲು ರಸ್ತೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಕ್ಯಾಮರಾಗಳು ಕಾರ್ಯಾರಂಭ ಮಾಡಿವೆ. ಹೊಸಹಳ್ಳಿ ಗ್ರಾಪಂ, ಅರೂಢಿ ಗ್ರಾಪಂನ ದಾನಿಗಳು ಇಲಾಖೆಗೆ ಜತೆ ಕೈಜೋಡಿಸದ್ದು 180 ಡಿಗ್ರಿ ಧ್ವನಿ ಸಹಿತ ಗ್ರಹಿಸುವ ವ್ಯವಸ್ಥೆ ಹಾಗೂ ಸ್ಪೀಕರ್ ಹೊಂದಿರುವ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಕಣ್ಗಾವಿಗೆ ಸಾಥ್ ನೀಡಿದ್ದಾರೆ.

ಠಾಣೆಗೆ ನೇರ ಲಿಂಕ್: ಈ ಎಲ್ಲ ಸಿಸಿ ಕ್ಯಾಮೆರಾಗಳನ್ನು ಹೊಸಹಳ್ಳಿ ಠಾಣೆಯ ಮಾನಿಟರ್‌ಗೆ ನೇರ ಸಂಪರ್ಕ

ಮಾಡಲಾಗಿದ್ದು, 24 ಗಂಟೆ ಮಾನಿಟರ್ ಮಾಡಲಾಗುತ್ತದೆ. ಅಲ್ಲದೆ ಠಾಣೆ ಸಿಬ್ಬಂದಿ ಮೊಬೈಲ್‌ಗೆ ಸಿಸಿಟಿವಿ ಮಾನಿಟರಿಂಗ್ ಲಿಂಕ್ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆ ನೀಡುವ ವ್ಯವಸ್ಥೆ ಹೊಂದಿವೆ.

ಬೆಚ್ಚಿ ಬೀಳಿಸಿದ್ದ ಬ್ಯಾಂಕ್ ದರೋಡೆ ಪ್ರಕರಣ

ಕಳೆದ ನ.25ರಂದು ಹೊಸಹಳ್ಳಿಯಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ನಡೆಸಿ ಸುಮಾರು 3.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, 14 ಲಕ್ಷ ರೂ. ನಗದು ದೋಚಿದ್ದ ಪ್ರಕರಣ ಇಡೀ ತಾಲೂಕನ್ನು ತಲ್ಲಣಗೊಳಿಸಿತ್ತು. ಇನ್‌ಸ್ಪೆಕ್ಟರ್ ರಾವ್ ನೇತೃತ್ವದ ಪೊಲೀಸ್ ಸಿಬ್ಬಂದಿ ಉತ್ತರ ಪ್ರದೇಶದ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಸಾಮಾಜಿಕ ಕಾರ್ಯ:

ರಸ್ತೆ ತಿರುವಿನಲ್ಲಿ ರಿಪ್ಲೆಕ್ಟರ್‌ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ಇನ್‌ಸ್ೆಕ್ಟರ್ ಗಣೇಶ್‌ರಾವ್ ಜನಾರ್ಧನ್ ದಾನಿಗಳ ಸಹಕಾರದಿಂದ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇತ್ತೀಚಿಗೆ ಹೊಸಹಳ್ಳಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುಸುವಲ್ಲಿಯೂ ಇವರ ಪಾತ್ರ ದೊಡ್ಡದಿದೆ. ಈ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾವ್ ಜನಾರ್ಧನ್ ಜನಸ್ನೇಹಿಯಾಗಿ ಠಾಣೆ ಅಭಿವೃದ್ಧಿ ಜತೆಗೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ, ದರೋಡೆ, ದುಶ್ಚಟಗಳಿಗೂ ಕಡಿವಾಣ ಹಾಕುತ್ತಿದ್ದಾರೆ ಎಂಬ ಮೆಚ್ಚುಗೆ ಗಳಿಸಿದ್ದಾರೆ.

ಹಿಂದುಳಿದ ಪ್ರದೇಶವಾದ್ದರಿಂದ ಸಾಕಷ್ಟು ನ್ಯೂನತೆಗಳಿದ್ದವು. ಇತ್ತೀಚೆಗೆ ಪ್ರದೇಶವು ವೇಗವಾಗಿ ಬೆಳೆಯುತ್ತಿರುವುದರಿಂದ ಸಿಸಿಟಿವಿ ಮತ್ತು ಆಧುನಿಕ ಸಲಕರಣೆಗಳು ಅಗತ್ಯವಾಗಿದ್ದವು. ಸ್ಥಳೀಯ ಗ್ರಾಪಂ ಮತ್ತು ದಾನಿಗಳ ಸಹಕಾರದಿಂದ ಸಿಸಿಟಿವಿ ಅಳವಡಿಸಲಾಗುತ್ತಿದೆ. ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ಸೋಲರ್ ಸಿಸ್ಟಮ್ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಿದೆ.

ಗಣೇಶ್‌ರಾವ್ ಜನಾರ್ಧನ್, ಇನ್‌ಸ್ಪೆಕ್ಟರ್ ಹೊಸಹಳ್ಳಿ ಠಾಣೆ,