ಕುಣಿಗಲ್: ಮಾಜಿ ಸಚಿವ ವೈ.ಕೆ.ರಾಮಯ್ಯ ಅವರು ಎಚ್.ಡಿ.ದೇವೇಗೌಡ ವಿರುದ್ಧ ತೊಡೆತಟ್ಟಿ ಹೋರಾಟ ಮಾಡದಿದ್ದರೇ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬರುತ್ತಿರಲಿಲ್ಲ, ಇದನ್ನು ಜಿಲ್ಲೆಯ ಬಿಜೆಪಿ, ಜೆಡಿಎಸ್ ನಾಯಕರು ಅರ್ಥ ಮಾಡಿಕೊಳ್ಳಬೇಕೆಂದು ಶಾಸಕ ಡಾ.ಎಚ್.ಡಿ.ರಂಗನಾಥ್ ವಿಪಕ್ಷದವರಿಗೆ ಟಾಂಗ್ ನೀಡಿದರು.
ತಾಲೂಕಿನ ಯಡಿಯೂರಿನಲ್ಲಿ ವೈ.ಕೆ.ರಾಮಯ್ಯ ಹೇಮಾವತಿ ನೀರು ಹೋರಾಟ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಲಿಂಕ್ ಕೆನಾಲ್ ಜನಜಾಗೃತಿ ಅಂದೋಲನದಲ್ಲಿ ಭಾಗವಹಿಸಿ ಮಾತನಾಡಿ, ಹೇಮಾವತಿ ಜಲಾಶಯದಿಂದ ಕುಣಿಗಲ್ ತಾಲೂಕು 200 ಕಿ.ಮೀ ದೂರವಿದೆ. ತಾಲೂಕಿಗೆ ನೀರು ಬರಬೇಕಾದರೇ ಸುಮಾರು ನೂರಕ್ಕೂ ಅಧಿಕ ಗೇಟ್ಗಳನ್ನು ದಾಟಿಕೊಂಡು ಕುಣಿಗಲ್ಗೆ ಹರಿಯಬೇಕಾಗಿದೆ. ಹಾಗಾಗಿ 20 ವರ್ಷಗಳಿಂದ ನಮ್ಮ ಪಾಲಿನ ಹೇಮೆ ನೀರು ನಮ್ಮ ತಾಲೂಕಿಗೆ ಹರಿದಿಲ್ಲ. ನೀರು ಹರಿಯದೇ ಇರುವುದಕ್ಕೆ ಜಿಲ್ಲೆಯ ಕೆಲ ಪ್ರಭಾವಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.
ಎಚ್.ಡಿ.ದೇವೇಗೌಡ ಅವರು ಮತ್ತು ವೈ.ಕೆ.ರಾಮಯ್ಯ ಅವರು ಒಂದೇ ಪಕ್ಷದಲ್ಲಿ ಇದ್ದರು. ಆ ವೇಳೆ ದೇವೇಗೌಡರು ನೀರಾವರಿ ಸಚಿವರಾಗಿದ್ದರು. ಆದರೆ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಸಬೂಬು ಹೇಳುತ್ತಾ ನೀರು ಹರಿಯಲು ಪರೋಕ್ಷವಾಗಿ ಅಡ್ಡಿ ಪಡಿಸಿದರು. ಇದರಿಂದ ಕೆಂಡಾ ಮಂಡಲರಾದ ವೈ.ಕೆ.ರಾಮಯ್ಯ ಎಚ್ಡಿಡಿ ವಿರುದ್ಧ ತೊಡೆ ತಟ್ಟಿ ಜಿಲ್ಲೆಗೆ ಹೇಮಾವತಿ ನೀರು ಹರಿಸಬೇಕು ಇಲ್ಲವಾದಲ್ಲಿ ಹಾಸನ ಕಡೆ ಬಸ್ ಬಿಡುವುದಿಲ್ಲ ಎಂದು ಕುಣಿಗಲ್ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ 48ರ ಬಿ.ಎಂ ರಸ್ತೆಗೆ ತಡೆ ಗೋಡೆ ನಿಮಾರ್ಣ ಮಾಡಿ ರಸ್ತೆ ತಡೆದು ಉಗ್ರ ಹೋರಾಟ ನಡೆಸಿದರು. ಇದರಿಂದ ಸರ್ಕಾರ ಇಕಟ್ಟಿಗೆ ಸಿಲುಕಿ ಹೇಮಾವತಿ ನಾಲಾ ಕಾಮಗಾರಿಗೆ ಹಣ ಬಿಡುಗಡೆ ಮಾಡಿ ನೀರು ಹರಿಸಲು ಸ್ಪಷ್ಟ ಆದೇಶ ಹೊರಡಿಸಿತ್ತು. ಬಳಿಕ 1992ರಲ್ಲಿ ಜಿಲ್ಲೆಗೆ ಹೇಮಾವತಿ ನೀರು ಹರಿಯಿತು. ಆದರೆ ಹೋರಾಟ ನಡೆಸಿ ಜಿಲ್ಲೆಗೆ ನೀರು ಹರಿಸಿದ ತಾಲೂಕಿಗೆ ನೀರಹರಿಯದೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ನಮ್ಮ ಪಾಲಿನ ನೀರು ಪಡೆಯಲು ಲಿಂಕ್ ಕೆನಾಲ್ ಕಾಮಗಾರಿ ಅತ್ಯಂತ ಪ್ರಮುಖವಾಗಿದೆ. ನಮ್ಮ ಬೇಡಿಕೆಗೆ ಸರ್ಕಾರ 996 ಕೋಟಿ ರೂ. ಹಣ ನೀಡಿ ಕಾಮಗಾರಿ ಪ್ರಾರಂಭಿಸಿದೆ. ಕೋಟ್ಯಾಂತರ ರೂ. ಬೆಲೆ ಬಾಳುವ ಸಾಮಗ್ರಿಗಳು ನಾಲೆ ಬಳಿ ಶೇಖರಣೆ ಮಾಡಿ ಇಟ್ಟಿದ್ದು, ನಾಲ್ಕು ಕಿ.ಮೀ ಕಾಮಗಾರಿ ಮುಗಿದಿದೆ. ಕಾಮಗಾರಿ ಪ್ರಾರಂಭವಾದಾಗ ಚಕಾರ ಎತ್ತದ ಬಿಜೆಪಿ&ಜೆಡಿಎಸ್ ಶಾಸಕರು ಈಗ ಚಕಾರ ಎತ್ತುತ್ತಿರುವುದು ರಾಜಕೀಯ ದುರುದ್ದೇಶವಾಗಿದೆ. ಹಲವು ಬಾರಿ ಕಾಮಗಾರಿಗೆ ಸಹಕರಿಸುವಂತೆ ಮನವಿ ಮಾಡಿದರೂ ನಮ್ಮ ಮನವಿಯನ್ನು ಲಘುವಾಗಿ ಕಾಣುತ್ತಿದ್ದಾರೆ. ವಿಪಕ್ಷಗಳ ಧೋರಣೆ ಹೀಗೆ ಮುಂದುವರೆದರೇ ವೈ.ಕೆ.ರಾಮಯ್ಯ ಅವರ ಮಾದರಿಯಲ್ಲಿ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು. ನಮ್ಮ ನೀರು ನಮ್ಮ ಹಕ್ಕು ನೀರು ಪಡೆಯಲು ಲಿಂಕ್ ಕೆನಾಲ್ ಹೋರಾಟಕ್ಕೆ ಸಿದ್ಧರಾಗುವಂತೆ ಶಾಸಕರು ಕರೆ ನೀಡಿದರು.
ಕಾಮಗಾರಿ ತಡೆಗೆ ಕುಮ್ಮಕ್ಕು: ಮುಖಂಡ ಗೋವಿಂದರಾಜು ಮಾತನಾಡಿ, ಲಿಂಕ್ ಕೆನಾಲ್ ಕಾಮಗಾರಿ ಮುಗಿದು ತಾಲೂಕಿಗೆ ನೀರು ಹರಿದು ಕೆರೆ ಕಟ್ಟೆಗಳು ತುಂಬಿದರೇ ಇದರ ಹೆಸರು ಡಾ.ಎಚ್.ಡಿ.ರಂಗನಾಥ್ ಅವರಿಗೆ ಸಲ್ಲುತ್ತದೆ, ಮುಂದೆ ನಮ್ಮ ರಾಜಕೀಯ ಭವಿಷ್ಯಕ್ಕೆ ಉಳಿಗಾಲವಿಲ್ಲ ಎಂದು ತಾಲೂಕಿನ ವಿಪಕ್ಷದವರು ಜಿಲ್ಲೆಯ ಜೆಡಿಎಸ್ ಮತ್ತು ಬಿಜೆಪಿ ಶಾಸಕರಿಗೆ ಕುಮ್ಮಕ್ಕು ನೀಡಿ ನಾಲೆ ಕಾಮಗಾರಿ ತಡೆಯಲು ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.