ಹೊಸಕೋಟೆಯ ಹರಳೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು. ಜಡಿಗೇನಹಳ್ಳಿ ಎಸ್​ಎಫ್​ಸಿಎಸ್​ ಅಧ್ಯಕ್ಷ ಕೆ.ಎಸ್​.ಸುರೇಶ್​, ಯೋಜನಾ ಪ್ರಾಧಿಕಾರ ನಿರ್ದೇಶಕ ಶಿವಕುಮಾರ್​, ಭೂ ಮಂಜೂರತಿ ಸಮಿತಿ ಸದಸ್ಯ ನಂಜೇಗೌಡ ಇದ್ದರು. 
ಜಿಲ್ಲೆ

ಹೊಸಕೋಟೆಯಿಂದ ಮಾಲೂರಿಗೆ ಸಿಸಿ ರಸ್ತೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹೊಸಕೋಟೆ : ಹೊಸಕೋಟೆ ಹಾಗೂ ಮಾಲೂರು ಮಾರ್ಗವನ್ನು ಶ್ರೀ ಸಿಮೆಂಟ್​ ರಸ್ತೆಯನ್ನಾಗಿಸುವ ಮೂಲಕ ಈ ಭಾಗದ ಗ್ರಾಮಗಳ ರಸ್ತೆ ಸಂಚಾರಕ್ಕೆ ಇದ್ದ ಹಲವು ವರ್ಷದ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಹರಳೂರಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿಶೇಷ ಅನುದಾನದ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಸೋಲೂರುನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ದೊಡ್ಡತಗ್ಗಲಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಹೈಮಾಸ್​ ಲೈಟ್​ ಅಳವಡಿಕೆ ಹಾಗೂ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಮಾಲೂರು ಮುಖ್ಯ ರಸ್ತೆಯಿಂದ ಚಿಕ್ಕತಗ್ಗಲಿ, ದೊಡ್ಡತಗ್ಗಲಿ ಮತ್ತು ಆಲಗೊಂಡನಹಳ್ಳಿ ಮಾರ್ಗವಾಗಿ ತೊರನಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕಿಸುವ 3.5 ಮೀ.ನಿಂದ 5.5 ಮೀಟರ್​ ಅಗಲೀಕರಣ ಹಾಗೂ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಸ್ತೆಗಳಲ್ಲಿ ಈ ಮೊದಲು ಪ್ರತಿ ಗಂಟೆಗೆ ಕೇವಲ ಹತ್ತಾರು ವಾಹನಗಳು ಮಾತ್ರ ಚಲಿಸುತಿದ್ದು, ಇದೀಗ ಈಗ ಪ್ರತಿ ಸೆಕೆಂಡಿಗೊಂದು ವಾಹನ ಸಂಚರಿಸುತ್ತಿದೆ. ಈ ರಸ್ತೆಗಳಲ್ಲಿ ಒಂದು ವಾಹನ ಬಂದರೆ ಎದರುಗಡೆ ಬರುವ ವಾಹನ ರಸ್ತೆಯಿಂದ ಅರ್ಧಭಾಗ ರಸ್ತೆಯಿಂದ ಕೆಳಗಿಳಿಯಬೇಕಿತ್ತು. ಇದರಿಂದ ಈ ಭಾಗದ ರೈತರಿಗೆ ಸರಕುಗಳನ್ನು ಸಾಗಿಸಲು ಕಷ್ಟವಾಗಿತ್ತು. ಆಗ ಈ ಭಾಗದಲ್ಲಿ ಜಮೀನಿನ ಬೆಲೆ ಎಕರೆಗೆ 30 ರಿಂದ 40 ಲಕ್ಷ ರೂ. ಇತ್ತು. ಆದರೆ ರಸ್ತೆ ವಿಸ್ತರಣೆಯಿಂದ ವಾಹನ ಸಂಚಾರದ ಜತೆಗೆ ಭೂಮಿಗೂ ಕೋಟಿ ಬೆಲೆ ಬಂದಿದ್ದು, ಈ ಭಾಗದಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ. ತಾಲೂಕಿನ ಅಭಿವೃದ್ಧಿಗೆ ನೀಲಿ ನೆಯಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಜಡಿಗೇನಹಳ್ಳಿಗೆ 10 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪಾಲಿಟೆಕ್ನಿಕ್​, 30 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ಯಾರ್ಡ್​ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಭಾಗಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಶರತ್​ ಬಚ್ಚೇಗೌಡ ಹೇಳಿದರು.

ಮುಖಂಡರಾದ ನಾರಾಯಣಗೌಡ, ಹನುಮಂತೇಗೌಡ, ನಂಜುಂಡೇ ಗೌಡ, ಶಂಕರೇಗೌಡ, ರಮೇಶ್​, ಏಸು, ಸಮಿಯುಲ್ಲಾ, ನಂಜೇಗೌಡ, ಮುನಿಯಣ್ಣ, ನಾರಾಯಣಸ್ವಾಮಿ ಇತರರು ಇದ್ದರು.