ಮೂಡಿಗೆರೆ: ಹೆಸಗಲ್ ಗ್ರಾಪಂ ವ್ಯಾಪ್ತಿಯ ಬಾಪುನಗರದಲ್ಲಿ ಜೆಜೆಎಂ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿ ವೇಳೆ ಸರ್ಕಾರದ ಅನುಮತಿ ಪಡೆದು ಸಿಸಿ ರಸ್ತೆ ಕತ್ತರಿಸಿ ಚರಂಡಿ ನಿರ್ಮಿಸಲಾಗಿದೆ. ಕತ್ತರಿಸಿದ ಭಾಗಕ್ಕೆ ಕಾಂಕ್ರೀಟಿಕರಣ ಮಾಡಲಾಗುವುದು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನಾಗರಾಜ್ ತಿಳಿಸಿದರು.
ಹೆಸಗಲ್ ಗ್ರಾಪಂಗೆ ಜೆಜೆಎಂ ಯೋಜನೆಯಲ್ಲಿ ಕುಡಿಯುವ ನೀರಿನ 2 ಕಾಮಗಾರಿಗೆ 2.14 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಬಿಳಗುಳ ಗ್ರಾಮದಲ್ಲಿ ಒಂದು ಕಾಮಗಾರಿ ಮುಗಿದಿದೆ. ಬಾಪುನಗರದಲ್ಲಿ ಇನ್ನೊಂದು ಕಾಮಗಾರಿ ನಡೆಯುತ್ತಿದೆ. ಶುಶಾಂತನಗರದಲ್ಲಿ ನಿರ್ಮಿಸಿರುವ ಕೊಳವೆ ಬಾವಿ ಮಾತ್ರವಲ್ಲದೆ ಚಿಕ್ಕಹಳ್ಳದಿಂದಲೂ ನೀರುಪೂರೈಕೆ ಮಾಡಲಾಗುತ್ತದೆ. ಇದಕ್ಕಾಗಿ ಶಕ್ತಿನಗರದಲ್ಲಿ ಬೃಹತ್‌ಟ್ಯಾಂಕ್ ನಿರ್ಮಿಸಲಾಗಿದೆ. ಗುಣಮಟ್ಟದ ಎಚ್‌ಡಿಪಿಇ ಪೈಪ್ ಅಳವಡಿಸಲು 1,259 ಮೀಟರ್ ಸಿಸಿ ರಸ್ತೆ ಮತ್ತು 649 ಮೀಟರ್ ಡಾಂಬರ್ ರಸ್ತೆಯನ್ನು ಒಂದುವರೆ ಅಡಿ ಅಗಲದಲ್ಲಿ ಕತ್ತರಿಸಿ ಚರಂಡಿ ನಿರ್ಮಿಸಿ ಪೈಪ್ ಅಳವಡಿಸಲು ಅನುಮತಿಯಿದೆ ಎಂದು ತಿಳಿಸಿದರು.
ನಾವು ಮಾತ್ರ ಒಂದು ಅಡಿ ಅಗಲದಲ್ಲಿ ಹೆಸಗಲ್ ಗ್ರಾಪಂ ಅಧ್ಯಕ್ಷರು, ಸ್ಥಳೀಯ ಸದಸ್ಯರು ಹಾಗೂ ಪಿಡಿಒ ಸಮ್ಮುಖದಲ್ಲಿ ರಸ್ತೆಯನ್ನು ಕತ್ತರಿಸಿ ಕಾಮಗಾರಿ ನಡೆಸಲಾಗಿದೆ. ರಸ್ತೆ ಕಾಮಗಾರಿ ತ್ವರಿತ ಗೊಳಿಸದಿದ್ದರೆ ಒಂದು ಕೋಟಿ ರೂ. ಅನುದಾನ ಸರ್ಕಾರಕ್ಕೆ ವಾಪಾಸ್ ಹೋಗುತ್ತಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ಕಾಮಗಾರಿ ಮುಂದುವರಿಸಲಾಗಿದೆ. ರಸ್ತೆಯನ್ನು ಹಾಳು ಮಾಡುವ ಉದ್ದೇಶವಿಲ್ಲ. ಮತ್ತೆ ಹಿಂದಿನಂತೆ ಸಿಸಿ ರಸ್ತೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.