ಜಿಲ್ಲೆ

ಗುತ್ತಿಗೆದಾರರನ್ನು ಕಳುಹಿಸಿಕೊಟ್ಟಿದ್ದೇ ಸಿ.ಸಿ ಪಾಟೀಲರು

ವೀರೇಶ ಸೌದ್ರಿ

ನರಗುಂದ: ಅಭಿವೃದ್ಧಿ ಬಗ್ಗೆ ಕೇಳಿದ ಪ್ರಶ್ನೆಗೆ ಶಾಸಕ ಸಿ.ಸಿ. ಪಾಟೀಲರು ಉತ್ತರಿಸುವುದರ ಬದಲು ಗುತ್ತಿಗೆದಾರರಿಂದ 6 ಕೋಟಿ ರೂ. ಪಡೆದಿರುವ ಆರೋಪ ಮಾಡಿದ್ದು ರಾಜಕೀಯ ದುರುದ್ದೇಶಪೂರಿತ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರು ಸಿ.ಸಿ. ಪಾಟೀಲ ಅವರಿಗೆ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿದರೆ ಶಾಸಕ ಸಿ.ಸಿ. ಪಾಟೀಲ ಅವರು, ನನ್ನ ನಿಮ್ಮೂರಿಗೆ ನೀವು ಹೋಗಬಹುದೆಂದು ಜರಿದಿದ್ದಾರೆ. ಕೆಲ ಬಾಕಿ ಕಾಮಗಾರಿಗಳ ಬಿಲ್ ಪಾವತಿಸಿಕೊಡುವಂತೆ ಗುತ್ತಿಗೆದಾರರನ್ನು ನನ್ನ ಬಳಿ ನೀವೇ ಕಳಿಸಿಕೊಟ್ಟಿದ್ದೀರಿ. ಸಂಕಷ್ಟದಲ್ಲಿದ್ದ ಗುತ್ತಿಗೆದಾರರಿಗೆ ತೋರಿದ ಉದಾರತೆಯನ್ನೇ ನೀವು ದುರುಪಯೋಗ ಪಡಿಸಿಕೊಂಡಿದ್ದೀರಿ ಹೊರತು ನಾನು ಅವರಿಂದ ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿ.ಸಿ. ಪಾಟೀಲ ಅಧಿಕಾರದಲ್ಲಿದ್ದಾಗ 5 ಸಾವಿರ ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದರು. ಕ್ಷೇತ್ರದಲ್ಲಿ 600 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತರಾತುರಿಯಲ್ಲಿ ಮಾಡಿದರು. ಈ ಪೈಕಿ 200 ಕೋಟಿ ರೂ. ಬಿಲ್ ಇನ್ನೂ ಬಾಕಿಯಿದೆ. ಇದಕ್ಕೆಲ್ಲ ನೀವು ಎಷ್ಟು ಕಮಿಷನ್ ಪಡೆದಿದ್ದೀರೆಂದು ಜನ ಪ್ರಶ್ನಿಸಿದ್ದಾರೆ. ಸೋತವರಿಗಿಂತ ಗೆದ್ದವರು ಹೆಂಗ್ ಲೂಟಿ ಮಾಡಬೇಕೆಂಬುದನ್ನು ಸ್ವಲ್ಪ ಹೇಳಿಕೊಡಿ. ಸೋತವರು ರೊಕ್ಕಾ ಮಾಡುವುದರ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದರೆ ಅಭ್ಯಂತರವಿಲ್ಲ. ಆದರೆ, ನನಗೂ ಅನೇಕ ಮಾರ್ಗಗಳಿವೆ. ನಿಮ್ಮ ಅನೇಕ ಹಗರಣಗಳು, ಶೇ. 40ರಷ್ಟು ಕಮಿಷನ್ ಪಡೆದಿರುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ ಎಂದರು.

ನರಗುಂದ ರೈತ ಬಂಡಾಯದಲ್ಲಿ 80 ಜನರ ಮೇಲೆ ಕೇಸ್ ದಾಖಲಾಗಿದ್ದವು. ಆಗ ಯಾರೊಬ್ಬರೂ ಮುಂದೆ ಬಾರದಿದ್ದಾಗ ಸಾಕಷ್ಟು ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಿ ಎಲ್ಲರನ್ನೂ ಬಿಡಿಸಿಕೊಂಡು ಬಂದಿದ್ದೇನೆ. ಚುನಾವಣೆಯಲ್ಲಿ ನಾನು ಗೆದ್ದು ಬಳಿಕ ಎಲ್.ಎಸ್. ಪಾಟೀಲರಿಗೆ ಎಲ್ಲ ರೀತಿಯ ಗೌರವ, ರಾಜಕೀಯ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದೇನೆ. ಆದರೆ, ಸಿ.ಸಿ.ಪಾಟೀಲರು ಪ್ರತಿಷ್ಠಿತ ಎಸ್.ಎಫ್. ಪಾಟೀಲರ ಕುಟುಂಬಸ್ಥರಿಗೆ ಏನು ಮಾಡಿದ್ದಿರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು 20 ವರ್ಷ ಶಾಸಕನಾಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈಗ ನೀವು ಶಾಸಕರಾಗಿದ್ದೀರಿ. ಮಾಜಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದೀರಿ. ಆದರೆ, ನೀವು ಸರಿಯಾಗಿ ಕೆಲಸ ಮಾಡದಿದ್ದಕ್ಕೆ ನಿಮ್ಮ ಪಕ್ಷದವರು ನಮ್ಮಲ್ಲಿ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ ಎಂದರು.

25 ಸಾವಿರ ರೂ. ಆಸೆಗೆ ಮಗನನ್ನು ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ಅವನು ವಕೀಲನಾಗಿರುವುದರಿಂದ ಪಕ್ಷ ಅವನನ್ನು ಗುರುತಿಸಿ ರಾಷ್ಟ್ರೀಯ ಸ್ಥಾನಮಾನ ನೀಡಿದೆಯೇ ಹೊರತು ನಿಮ್ಮ ಮಕ್ಕಳಂತೆ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಲು ಸರ್ಕಾರಿ ಅಧಿಕಾರಿಗಳ ಅಥವಾ ಜಿಲ್ಲಾ ಮಂತ್ರಿಗಳೊಂದಿಗೆ ಸಭೆ ಮಾಡಲು ಬಿಟ್ಟಿಲ್ಲ ಎಂದರು.

ಪ್ರವೀಣ ಯಾವಗಲ್, ವಿವೇಕ ಯಾವಗಲ್, ಎಂ.ಎಸ್.ಪಾಟೀಲ, ರಾಜು ಕಲಾಲ, ಗುರುಪಾದಪ್ಪ ಕುರಹಟ್ಟಿ, ನೀಲಪ್ಪ ಗುಡದನ್ನವರ, ಉದಯ ಮುಧೋಳೆ, ಬಿ.ಎನ್.ಮಾನೆ, ಎಂ.ಬಿ.ಅರಹುಣಸಿ, ದಿವಾನಸಾಬ ಕಿಲ್ಲೇದಾರ, ವಿರೇಶ ಚುಳಕಿ, ಕೆ.ಬಿ.ಖಲೀಫ, ಉದಯಗೌಡ ವೀರನಗೌಡ್ರ, ಮಲ್ಲೇಶ ಅಬ್ಬಿಗೇರಿ, ಬಸವರಡ್ಡಿ ಹಂಚಿನಾಳ, ಪ್ರಕಾಶ ಹಡಗಲಿ, ವಿಷ್ಣು ಸಾಠೆ, ಇತರರಿದ್ದರು.