ಜಿಲ್ಲೆ

ಅಕ್ರಮಗಳೇ ನಡೆಯದಿದ್ರೆ ತನಿಖೆಗೆ ತಡೆ ತಂದಿದ್ದು ಏಕೆ?, ಕೋಚಿಮುಲ್ ನಿರ್ದೇಶಕ ಕಾಂತರಾಜು ಪ್ರಶ್ನೆ, ಡಿಸಿಸ ಬ್ಯಾಂಕ್ ಆರೋಪ ಸಾಬೀತಿಗೆ ಬಹಿರಂಗ ಚರ್ಚೆಗೆ ಆಹ್ವಾನ

Chikkaballapur

ಗೌರಿಬಿದನೂರು : ಶೂನ್ಯ ಬಡ್ಡಿದರ ಯೋಜನೆ ದುರ್ಬಳಕೆ, ಸಾಲ ನೀಡಲು ಸಂಘಗಳಿಂದ ಹಣ ವಸೂಲಿ ಸೇರಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿವೆ ಎನ್ನಲಾಗುತ್ತಿರುವ ಅಕ್ರಮಗಳ ಆರೋಪ-ಪ್ರತ್ಯಾರೋಪಗಳ ಜಟಾಪಟಿ ಮುಂದುವರಿದಿದೆ. ದೇವಾಲಯಗಳಲ್ಲಿ ಆಣೆ ಪ್ರಮಾಣ, ಬಹಿರಂಗ ಚರ್ಚೆ ಆಹ್ವಾನದ ಹಂತಕ್ಕೆ ಬಂದಿದೆ.

ಸಾಲ ಅನುಮೋದನೆಗೆ ಸಂಘಗಳಿಂದ ಹಣ ಪಡೆದಿರುವುದನ್ನು ಸಾಬೀತು ಮಾಡಿದರೆ ರಾಜೀನಾಮೆ ನೀಡಿ ನೇಣು ಹಾಕಿಕೊಳ್ಳುತ್ತೇನೆ ಎಂಬ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಸವಾಲಿಗೆ ಪ್ರತಿ ಸವಾಲು ಹಾಕಿರುವ ಕೋಚಿಮುಲ್ ನಿರ್ದೇಶಕ ಕಾಂತರಾಜು, ನಗರಸಭೆ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ, ಅಲಕಾಪುರ ವಿಎಸ್ಸೆಸ್ಸೆನ್ ಅಧ್ಯಕ್ಷ ಆರ್.ಪಿ.ಗೋಪಾಲಗೌಡ, ಅಕ್ರಮಗಳೇ ನಡೆಯದಿದ್ದರೆ ತನಿಖೆಗೆ ತಡೆಯಾಜ್ಞೆ ತಂದಿರುವುದಾದರೂ ಏಕೆ? ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ಕಮಿಷನ್ ವಸೂಲಿ ಮಾಡಿರುವುದು ಸುಳ್ಳಾಗಿದ್ದರೆ ತಾಲೂಕಿನ ವಿದುರಾಶ್ವತ್ಥ, ಮುದಗಾನಕುಂಟೆ ಹಾಗೂ ಅಲಕಾಪುರ ದೇವಾಲಯಗಳಲ್ಲಿ ಪ್ರಮಾಣ ಮಾಡಲಿ, ಇಲ್ಲವೇ ನಾವೇ ಕೋಲಾರದ ಅಂತರಗಂಗೆಗೆ ಬರುತ್ತೇವೆ, ಬಹಿರಂಗ ಚರ್ಚೆ ಮಾಡೋಣ ಎಂದು ಆಹ್ವಾನ ನೀಡಿದ್ದಾರೆ.

ಸಹಕಾರಿ ನಿಯಮಗಳನ್ನು ಗಾಳಿಗೆ ತೂರಿ ಕೋಟ್ಯಂತರ ರೂ.ಸಾಲ ಮಂಜೂರು ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದೇವೆ, ಅಧ್ಯಕ್ಷರೇ ನೇರವಾಗಿ ಕಮಿಷನ್ ಪಡೆಯುತ್ತಿಲ್ಲ, ಕಾರ್ಯದರ್ಶಿಗಳಿಂದ ನಿರ್ದೇಶಕರಿಗೆ, ನಿರ್ದೇಶಕರಿಂದ ಅಧ್ಯಕ್ಷರಿಗೆ ಸಂದಾಯವಾಗುತ್ತಿದೆ. ಆದರೆ ಕಾರ್ಯದರ್ಶಿಗಳ ಸಭೆ ಕರೆದು ನಾನು ನಿಮ್ಮಿಂದ ಒಂದು ರೂಪಾಯಿ ಪಡೆದಿದ್ದರೆ ಹೇಳಿ ಎನ್ನುವುದು ಹಾಸ್ಯಾಸ್ಪದ ಎಂದು ಕಾಂತರಾಜು ಜರಿದರು.

ಫಲಾನುಭವಿಗಳ ಖಾತೆಗೆ ನೇರವಾಗಿ ಸಾಲದ ಹಣ ಜಮಾ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ, ಆದರೆ ರೂಪೇ ಕಾರ್ಡ್‌ನಲ್ಲಿ ಎಷ್ಟು ವಹಿವಾಟು ನಡೆಸಲಾಗಿದೆ ಎಂಬುದು ಚರ್ಚೆಗೆ ಬರಲಿ ಎಂದು ಆರ್.ಪಿ.ಗೋಪಾಲಗೌಡ ಗಮನ ಸೆಳೆದರು.

ಈಗ ಪ್ರೀತಿ ತೋರಿಸುತ್ತಿದ್ದಾರೆ! : ಹಣ ಸಂಪಾದನೆಗಾಗಿ ನಾವು ಗುತ್ತಿಗೆ ಕೆಲಸ ಮಾಡಿಕೊಂಡಿದ್ದರೆ ಇಂದು ಎಲ್ಲೋ ಇರುತ್ತಿದ್ದೆವು. ಆದರೆ ದಶಕಗಳ ಕಾಲ ಹಿಂದುಳಿದ ವರ್ಗಗಳ ನಾಯಕ ಜಾಲಪ್ಪನವರ ಮಾರ್ಗದರ್ಶನದಲ್ಲಿ ಬೆಳೆದು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಜಾಲಪ್ಪನವರು 2005ರಲ್ಲೇ ಸಕ್ರಿಯ ರಾಜಕೀಯದಿಂದ ದೂರ ಸರಿದರು. ಅಂದಿನಿಂದ ಅವರತ್ತ ನೋಡದ ಶಾಸಕರು ಈಗ ಪ್ರೀತಿ ತೋರಿಸುತ್ತಿದ್ದಾರೆ ಎಂದು ಕಾಂತರಾಜು ಲೇವಡಿ ಮಾಡಿದರು.

ಶಾಸಕರು ಮಾಡಿದ್ದು ಏನು? : ಸ್ತ್ರೀಶಕ್ತಿ ಸಂಘಗಳಿಂದ ಠೇವಣಿ ಹಣ ಪಡೆದು 10 ತಿಂಗಳಾದರೂ ಸಾಲ ವಿತರಣೆ ಮಾಡದ ದಾಖಲೆಗಳು ನಮ್ಮ ಬಳಿ ಇವೆ. ಈ ಬಗ್ಗೆ ಬಂಹಿರಂಗ ಚರ್ಚೆಗೆ ಆಹ್ವಾನಿಸಿದ ನಗರಸಭೆ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ, ನಿಯತ್ತು ಇಲ್ಲದೆ ಶಾಸಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂಬ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಶಾಸಕ ಶಿವಶಂಕರರೆಡ್ಡಿ ಅವರು ತಮ್ಮ ರಾಜಕೀಯ ಗುರುಗಳಾದ ವಿ.ಕೃಷ್ಣರಾವ್ ಹಾಗೂ ಅಶ್ವತ್ಥನಾರಾಯಣರೆಡ್ಡಿ ಅವರಿಗೆ ಮಾಡಿದ್ದು ಏನು ಎಂದು ಪ್ರಶ್ನಿಸಿದರು.

ಮುಖಂಡರಾದ ವೆಂಕಟರಾಮರೆಡ್ಡಿ, ಶ್ರೀನಿವಾಸಗೌಡ, ಪವನ್‌ರೆಡ್ಡಿ ಹಾಗೂ ಇತರರಿದ್ದರು.