ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಕುಮಾರಸ್ವಾಮಿ ಹಾಗೂ ಅವರ ಮಗ ಹಾಲಿ ಸದಸ್ಯ ಗೋವಿಂದರಾಜು ಮನೆ ಮೇಲೆ ಸಿಬಿಐ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ವಿಚಾರಣೆ ನಡೆಸಿದರು.
ಜಿಲ್ಲೆಯಲ್ಲಿ ಗೋವಿಂದರಾಜು ಮೊಟ್ಟೆ ವ್ಯಾಪಾರ ಉದ್ಯಮಿಯಾಗಿದ್ದಾರೆ. ಇವರು ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಮೊಟ್ಟೆ ಸೇರಿದಂತೆ ನಾನಾ ವ್ಯಾಪಾರ ವಹಿವಾಟು ಹೊಂದಿದ್ದಾರೆ. ಹಾಲಿ ಶಾಸಕ ಬಿ.ನಾಗೇಂದ್ರ ಅಪ್ತ ನೆಕ್ಕಂಟಿ ನಾಗರಾಜ ಖಾತೆಯಿಂದ ಗೋವಿಂದರಾಜು ಖಾತೆಗೆ ಕೂಡ ಹಣ ವರ್ಗಾವಣೆಯಾಗಿದೆ ಎಂಬ ಆರೋಪದಡಿ ದಾಳಿ ನಡೆದಿದೆ ಎನ್ನಲಾಗಿದೆ. ಅಲ್ಲದೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೂ ಮುನ್ನ ಗೋವಿಂದರಾಜು ಮನೆಯನ್ನು ಶಾಸಕ ಬಿ.ನಾಗೇಂದ್ರ ಅವರಿಗೆ ಮಾರಾಟ ಮಾಡಿದ್ದು, ಇದರಲ್ಲಿ ಕೋಟ್ಯಾಂತರ ರೂ. ವಹಿವಾಟು ಆಗಿರಬಹುದು ಎಂಬ ಶಂಕೆಯಿಂದ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿದವು.
ಬಿ.ನಾಗೇಂದ್ರಗೆ ಶಾಕ್ : ಮಾಜಿ ಸಚಿವ, ಹಾಲಿ ಶಾಸಕ ಬಿ.ನಾಗೇಂದ್ರ ಹುಟ್ಟುಹಬ್ಬದ ದಿನವೇ ಅಪ್ತನ ಮೇಲೆ ಸಿಬಿಐ ದಾಳಿ ನಡೆಸಿ ಶಾಕ್ ನೀಡಿದೆ. ಇದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆ ನಡೆದಿರುವ ದಾಳಿ ಎನ್ನಲಾಗಿದ್ದು ಬೆಂಗಳೂರಿನಿಂದ ಆಗಮಿಸಿದ ಸಿಬಿಐ ತಂಡ ಅಗತ್ಯ ದಾಖಲೆಗಳ ಪರಿಶೀಲಿಸಿ ವಿಚಾರಿಸಲಾಯಿತು.