ಮೈಸೂರು: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್) ಕಚೇರಿಗೆ ಕೇಂದ್ರೀಯ ತನಿಖಾ ದಳ(ಸಿಬಿಐ)ದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾನಸಗಂಗೋತ್ರಿಯಲ್ಲಿರುವ ಸಂಸ್ಥೆಯ ಕಚೇರಿಗೆ ಆಗಮಿಸಿದ ಸಿಬಿಐ ಅಧಿಕಾರಿಗಳು ಆಯಿಷ್ ನಿರ್ದೇಶಕರು, ಮುಖ್ಯ ಲೆಕ್ಕಾಧಿಕಾರಿ, ಮುಖ್ಯ ಆಡಳಿತಾಧಿಕಾರಿ ಕಚೇರಿ ಸೇರಿದಂತೆ ಕೆಲ ವಿಭಾಗಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿದರು.
ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಲೆಕ್ಕ ಪತ್ರಗಳ ಪರಿಶೋಧನೆ ನಡೆಸಿ ಮಾಹಿತಿ ಕಲೆಹಾಕಿದರು.
‘ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳಿಗೆ ಸಿಬಿಐ ಅಧಿಕಾರಿಗಳ ತಂಡ ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಇದು ಸಾಮಾನ್ಯ ಆಡಳಿತ ಪ್ರಕ್ರಿಯೆ. ಅಂತೆಯೇ, ಸಿಬಿಐ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನಾ ಕಾರ್ಯ ನಡೆಸಿದೆ. ಇದರಲ್ಲಿ ಅಂತಹ ವಿಶೇಷ ಏನೂ ಇಲ್ಲ’ ಎಂದು ಆಯಿಷ್ ನಿರ್ದೇಶಕಿ ಡಾ.ಪುಷ್ಪಾವತಿ ತಿಳಿಸಿದ್ದಾರೆ.
1966ರಲ್ಲಿ ಸ್ಥಾಪನೆಯಾದ ಇದು ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ, ಕ್ಲಿನಿಕಲ್ ಕೇರ್ ಮತ್ತು ಸಂವಹನ ಅಸ್ವಸ್ಥತೆಗಳ ಕುರಿತು ಅಧ್ಯಯನ, ಚಿಕಿತ್ಸೆ, ಸಂಶೋಧನೆ ಮಾಡುವ ರಾಷ್ಟ್ರೀಯ ಪ್ರವರ್ತಕ ಸಂಸ್ಥೆಯಾಗಿದೆ. ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿದೆ.