ಜಿಲ್ಲೆ

ತಾರ್ಕಿಕ ಅಂತ್ಯ ತಲುಪಿದ ಸಿಬಿಐ ತನಿಖೆ

Dharwad

ಧಾರವಾಡ: ಜಮೀನು ವಿವಾದವೆಂದು ತೆರೆ ಎಳೆದಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಿಬಿಐ ಅಧಿಕಾರಿಗಳು ಮರುಜೀವ ನೀಡುವ ಮೂಲಕ ರ್ತಾಕ ಅಂತ್ಯದತ್ತ ಕೊಂಡೊಯ್ದಿದ್ದು, ಇಡೀ ಪ್ರಕರಣದ ಸ್ವರೂಪವನ್ನೇ ಬದಲಾಯಿಸಿದ್ದಾರೆ.

2016ರ ಜೂ. 15ರಂದು ಸಪ್ತಾಪುರದ ಯೋಗೀಶಗೌಡ ಅವರ ಉದಯ ಜಿಮ್ಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ ಪೊಲೀಸರು ಮೂರು ದಿನಗಳಲ್ಲಿ ಬಸವರಾಜ ಮುತ್ತಗಿ ಸೇರಿ ಆರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಯೋಗೀಶಗೌಡ ಸಹೋದರ ಗುರುನಾಥಗೌಡ ಹಾಗೂ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದರು. ಮಾಜಿ ಸಚಿವ ವಿನಯ ಕುಲಕರ್ಣಿ ಕೈವಾಡವಿದ್ದು, ಸಾಕ್ಷಿ ನಾಶಕ್ಕೂ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅಂದಿನಿಂದಲೇ ಒತ್ತಾಯಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದ ಕಾರಣಕ್ಕೆ ಪ್ರಕರಣವನ್ನು ಸಿಬಿಐಗೆ ವಹಿಸಲು ಮೀನಮೇಷ ಎಣಿಸಲಾಯಿತು. ಇದಾದ ಮೂರು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತು. ಅಧಿಕಾರಿಗಳು ತನಿಖೆ ಪ್ರಾರಂಭಿಸಿದ ಕೆಲ ದಿನಗಳಲ್ಲೇ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದರಿಂದ ಕೆಲ ಕಾಲ ತನಿಖೆ ಸ್ಥಗಿತಗೊಳಿಸಲಾಯಿತು.

ಈ ವಿಚಾರವಾಗಿ ಸಿಬಿಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತೆರವಿಗೆ ಮನವಿ ಮಾಡಿದ್ದರು. ನ್ಯಾಯಾಲಯವು ಈ ತಡೆಯಾಜ್ಞೆಯನ್ನು ತೆರವುಗೊಳಿಸುತ್ತಿದ್ದಂತೆ 2020ರ ಫೆಬ್ರವರಿಯಲ್ಲಿ ಮತ್ತೆ ತನಿಖೆ ಪ್ರಾರಂಭಿಸಿದ ಅಧಿಕಾರಿಗಳು, ನಗರ ಉಪನಗರ ಠಾಣೆಯಲ್ಲಿ ಅನೇಕ ಜನರನ್ನು ವಿಚಾರಣೆಗೆ ಒಳಪಡಿಸಿದ್ದರು. ಕಳೆದ ಮಾರ್ಚ್ 1ರಂದು ಬೆಂಗಳೂರು ಹಾಗೂ ತಮಿಳುನಾಡು ಮೂಲದ 6 ಜನ ಸುಪಾರಿ ಹಂತಕರನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದರು. ಇದಾದ ಬಳಿಕ ಸ್ಥಳೀಯ ಕಾಂಗ್ರೆಸ್ ನಾಯಕರಾದ ನಾಗರಾಜ ಗೌರಿ, ಶಿವಾನಂದ ಕರಿಗಾರ ಸೇರಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತರ ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದರು.

ಇನ್ನು ಸೆ. 26ರಂದು ವಿನಯ ಕುಲಕರ್ಣಿ ಅವರ ಸಹೋದರ ವಿಜಯ ಕುಲಕರ್ಣಿ ಅವರನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಳಿಕ ಇನ್ನೂ ಕೆಲವರ ವಿಚಾರಣೆ ನಡೆಸಿದ ಅಧಿಕಾರಿಗಳು, ಕೊನೆಗೆ ಮಾಜಿ ಸಚಿವರನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದಾರೆ. ಪ್ರಕರಣದಲ್ಲಿ ರಾಜಕೀಯ ನಾಯಕರ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರೂ ಸ್ಥಳೀಯ ಪೊಲೀಸರು ಮಾತ್ರ ಕೆಲವರನ್ನು ಬಂಧಿಸಿ ಪ್ರಕರಣ ಇತ್ಯರ್ಥಗೊಳಿಸಲು ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ, ಈಗ ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡ ಬಳಿಕ ಹಲವರ ಮುಖವಾಡ ಕಳಚತೊಡಗಿದೆ.

ಬೆಳಗ್ಗೆಯಿಂದ ಸಹೋದರರಿಗೆ ಸಿಬಿಐ ಡ್ರಿಲ್

ಧಾರವಾಡ: ಜಿಪಂ ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಗುರುವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೂ ಹಲವಾರು ತುರುಸಿನ ವಿದ್ಯಮಾನಗಳು ಜರುಗಿದವು.

ಬೆಳಗ್ಗೆ 7 ಗಂಟೆ ಸುಮಾರಿಗೆ ವಿನಯ ಕುಲಕರ್ಣಿ ಅವರ ಬಾರಾಕೊಟ್ರಿಯ ಮನೆಗೆ ಸಿಬಿಐ ಅಧಿಕಾರಿಗಳ ತಂಡ ಲಗ್ಗೆ ಇಟ್ಟಿತು. ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ವಶಕ್ಕೆ ಪಡೆಯಲಾಯಿತು. ವಿನಯ ಪುತ್ರಿ ತಮ್ಮ ಕಾರ್​ನಲ್ಲಿ ತಂದೆಯನ್ನು ಉಪನಗರ ಠಾಣೆಗೆ ವಿಚಾರಣೆಗಾಗಿ ಬಿಟ್ಟು ಹೋದರು.

ಬೆಳಗ್ಗೆ 9 ಗಂಟೆಗೆ ವಿನಯ ಸಹೋದರ ವಿಜಯ ಕುಲಕರ್ಣಿ ಅವರನ್ನು ಹುಬ್ಬಳ್ಳಿಯ ಪ್ರಗತಿ ಕಾಲನಿಯ ಮನೆಯಿಂದ ಸಿಬಿಐ ಅಧಿಕಾರಿಗಳು ಉಪನಗರ ಠಾಣೆಗೆ ವಿಚಾರಣೆಗಾಗಿ ಕರೆತಂದರು. ಠಾಣೆಯ ಮೊದಲ ಮಹಡಿಯಲ್ಲಿ ವಿನಯ ಹಾಗೂ 2ನೇ ಮಹಡಿಯಲ್ಲಿ ವಿಜಯ ಕುಲಕರ್ಣಿ ಅವರನ್ನು ಸುದೀರ್ಘ ವಿಚಾರಣೆ ನಡೆಸಿದರು.

ಬೆಳಗ್ಗೆ 10 ಗಂಟೆಗೆ ವಿನಯ ಆಪ್ತ ಶ್ರೀ ಪಾಟೀಲ ಎಂಬಾತನನ್ನು ಸಿಬಿಐ ಅಧಿಕಾರಿಗಳು ಉಪನಗರ ಠಾಣೆಗೆ ಕರೆತಂದರು. ಶ್ರೀಶ ಪಾಟೀಲ ಹುಬ್ಬಳ್ಳಿಯವರು. ಕೊಲೆ ಪ್ರಕರಣದಲ್ಲಿ ಹಣಕಾಸಿನ ವ್ಯವಹಾರ ನಡೆದಿದೆ ಎನ್ನಲಾಗಿದ್ದು, ಆ ವಿಚಾರವಾಗಿ ಶ್ರೀಶ ಪಾಟೀಲ ವಿಚಾರಣೆ ಕೈಗೊಳ್ಳಲಾಯಿತು. 11 ಗಂಟೆ ಸುಮಾರಿಗೆ ಶ್ರೀಶ ಪಾಟೀಲ ವಿಚಾರಣೆಗೊಳಪಟ್ಟು ಠಾಣೆಯಿಂದ ಹೊರನಡೆದರು.

ಈ ಮಧ್ಯೆ ವಿನಯ ಡೈರಿಯ ಉಸ್ತುವಾರಿ ನೋಡಿಕೊಳ್ಳುವ ನಟರಾಜ ಎಂಬಾತನನ್ನು ಠಾಣೆಗೆ ಕರೆಸಿ ಕೆಲಕಾಲ ವಿಚಾರಣೆಗೊಳಪಡಿಸಲಾಯಿತು. ವಿನಯ ಮನೆಯಿಂದ ಠಾಣೆಗೆ ಆಗಮಿಸುವ ಮೊದಲು ನಟರಾಜ್​ಗೆ

ಕರೆ ಮಾಡಿದ್ದರಿಂದ ಆ ವಿಚಾರವಾಗಿ ಸಿಬಿಐ ತಂಡ ವಿಚಾರಣೆ ನಡೆಸಿತು ಎನ್ನಲಾಗಿದೆ. ನಂತರ ವಿನಯ ಸಂಬಂಧಿ, ವಿಜಯಪುರದ ಚಂದು ಇಂಡಿ ಎಂಬುವರು ಠಾಣೆಗೆ ಹಾಜರಾದರು.

ಸಂಜೆ 4.45ಕ್ಕೆ ವಿನಯ ಕುಲಕರ್ಣಿ ಅವರನ್ನು ಪೊಲೀಸ್ ಭದ್ರತೆಯೊಂದಿಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಕೋವಿಡ್ ಟೆಸ್ಟ್ ಹಾಗೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. 5.25ಕ್ಕೆ ಆರೋಗ್ಯ ತಪಾಸಣೆ ಮುಗಿದ ನಂತರ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವಿನಯ ಕುಲಕರ್ಣಿ ಅವರನ್ನು ನ್ಯಾಯಾಧೀಶರಾದ ಎಚ್. ಪಂಚಾಕ್ಷರಿ ಅವರೆದುರು ಹಾಜರುಪಡಿಸಲಾಯಿತು. ಸುಮಾರು 1 ಗಂಟೆ ವಿಚಾರಣೆಯ ನಂತರ ವಿನಯಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ರಾತ್ರಿ 8 ಗಂಟೆ ಸುಮಾರಿಗೆ ವಿಜಯ ಕುಲಕರ್ಣಿ ಹಾಗೂ ಚಂದು ಇಂಡಿಯನ್ನು ಉಪನಗರ ಠಾಣೆಯಿಂದ ಹೊರಕಳುಹಿಸಲಾಯಿತು. ಶುಕ್ರವಾರ ಬೆಳಗ್ಗೆ 9.30ಕ್ಕೆ ವಿಜಯ ಕುಲಕರ್ಣಿ ಉಪನಗರ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಘಟನಾವಳಿಗಳು....

2016ರ ಜೂನ್ 15ರಂದು ಹೆಬ್ಬಳ್ಳಿ ಜಿಪಂ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ

ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿನ ಅವರ ಒಡೆತನದ ಉದಯ ಜಿಮ್ಲ್ಲಿ ಬೆಳಗ್ಗೆ 6.30ಕ್ಕೆ ಕೊಲೆ

2016ರ ಜೂ. 20ರಂದು ಕೊಲೆ ಆರೋಪಿದ ಮೇರೆಗೆ ಬಸವರಾಜ ಮುತ್ತಗಿ, ವಿನಾಯಕ ಕಟಗಿ, ಸಂದೀಪ ಸವದತ್ತಿ, ವಿಕ್ರಂ ಬಳ್ಳಾರಿ, ಕೀರ್ತಿ ಕುರಹಟ್ಟಿ, ಮುದಕಪ್ಪ ಹೊಂಗಲ್ ಅವರನ್ನು ಬಂಧಿಸಿದ ಧಾರವಾಡ ಉಪನಗರ ಠಾಣೆ ಪೊಲೀಸರು

ಇವರು ನಿಜವಾದ ಕೊಲೆಗಾರರಲ್ಲ ಎಂದು ಆರೋಪಿಸಿದ್ದ ಯೋಗೀಶಗೌಡ ಗೌಡರ ಕುಟುಂಬಸ್ಥರಿಂದ ಸಿಬಿಐ ತನಿಖೆಗೆ ಆಗ್ರಹ

2017ರ ಡಿಸೆಂಬರ್​ನಲ್ಲಿ ಕಮಲ ಬಿಟ್ಟು ಕೈ ಪಾಳಯ ಸೇರಿದ ಯೋಗೀಶ ಪತ್ನಿ ಮಲ್ಲಮ್ಮ ಗೌಡರ. ಇದರ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು. ಮಲ್ಲಮ್ಮ ಅವರು ಕಾಂಗ್ರೆಸ್ ಸೇರಿದ್ದಕ್ಕೆ ಪ್ರಕರಣಕ್ಕೆ ಹಿನ್ನಡೆ. ಮೊದಲನೇ ದೂರುದಾರಳಾಗಿದ್ದ ಮಲ್ಲಮ್ಮಳೇ ಪ್ರಕರಣದಿಂದ ಹಿಂದೆ ಸರಿದ ಕಾರಣಕ್ಕೆ ಭಾರಿ ಹಿನ್ನಡೆ ಅನುಭವಿಸಿದ್ದ ಯೋಗೀಶ ಕುಟುಂಬ

2018ರಲ್ಲಿ ಹೈಕೋರ್ಟ್ ಏಕ ಸದಸ್ಯ ಪೀಠದ ಮೆಟ್ಟಿಲೇರಿದ್ದ ಕುಟುಂಬಸ್ಥರು. ಪೊಲೀಸ್ ತನಿಖೆ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್

ಯೋಗೀಶ ತಾಯಿ ತುಂಗಮ್ಮ, ಅಣ್ಣ ಗುರುನಾಥಗೌಡರಿಂದ ಕಾನೂನು ಹೋರಾಟ ಮುಂದುವರಿಕೆ. ಈ ಮಧ್ಯೆ ಸಾಕ್ಷಿ ನಾಶ ಪ್ರಕರಣ ದಾಖಲಿಸಿದ ಗುರುನಾಥಗೌಡ

ಸಂಧಾನಕ್ಕೆ ವಿನಯ ಕುಲಕರ್ಣಿ ಒತ್ತಡ ಹೇರಿದ್ದರು ಎಂದು ಯೋಗೀಶ ಕುಟುಂಬಸ್ಥರಿಂದ ಪ್ರಕರಣ ದಾಖಲು. ಬಿ ರಿಪೋರ್ಟ್ ಹಾಕಿ ಪ್ರಕರಣ ಕ್ಲೋಸ್ ಮಾಡಿದ ಪೊಲೀಸರು

2019ರ ಸೆ. 7ರಂದು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಶಿಫಾರಸು. ತನಿಖೆ ಆರಂಭಿಸಿದ ಸಿಬಿಐ

2020ರ ಮಾರ್ಚ್​ನಲ್ಲಿ ಬೆಂಗಳೂರು, ತಮಿಳುನಾಡು ಮೂಲದ 6 ಜನರ ಸುಪಾರಿ ಕೊಲೆಗಾರರ ಬಂಧಿಸಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ಸಿಬಿಐ

ಕೊಲೆಯ ಹಿಂದೆ ಕೋಟ್ಯಂತರ ರೂಪಾಯಿ ಹರಿದಾಡಿದೆ ಎನ್ನುವ ಅನುಮಾನ, ಅನೇಕರನ್ನು ವಿಚಾರಣೆ ನಡೆಸಿದ ಸಿಬಿಐ. 2020ರ ಅಕ್ಟೋಬರ್​ನಲ್ಲಿ ಬೆಂಗಳೂರು ಹಾಗೂ ಧಾರವಾಡದಲ್ಲಿ ವಿನಯ ಸಹೋದರ ವಿಜಯ ಕುಲಕರ್ಣಿ ವಿಚಾರಣೆ ನಡೆಸಿದ್ದ ಸಿಬಿಐ

ನಿರಂತರ ವಿಚಾರಣೆ ನಡೆದ ಬಳಿಕ ನ. 5ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ

ಜಮೀನು ವಿವಾದಕ್ಕಾಗಿ ಕೊಲೆ ನಡೆದಿದೆ ಎಂದು ಧಾರವಾಡ ಉಪ ನಗರ ಠಾಣೆ ಪೊಲೀಸರು ಇದುವರೆಗೆ ಬಂಧಿಸಿದ ಆರೋಪಿಗಳು: ಬಸವರಾಜ ಮುತ್ತಗಿ ವಿಕ್ರಂ ಬಳ್ಳಾರಿ ಕೀರ್ತಿ ಕುಮಾರ ಕುರಹಟ್ಟಿ, ಸಂದೀಪ ಸವದತ್ತಿ ವಿನಾಯಕ ಕಟಗಿ ಮಹಾಬಳೇಶ್ವರ ಅಲಿಯಾಸ್ ಮುದುಕಪ್ಪ ಹೊಂಗಲ

ಸಿಬಿಐ ಬಂಧಿಸಿದ ಆರೋಪಿಗಳು: ಸಂತೋಷ ಸವದತ್ತಿ ದಿನೇಶ ಅಶ್ವತ್ಥ ಸುನೀಲ ಕೆ.ಎಸ್. ನಜೀರ ಅಹ್ಮದ್ ಶಹನವಾಜ್ ನೂತನ ಕೆ.ಎನ್. ವಿನಯ ಕುಲಕರ್ಣಿ