ಜಿಲ್ಲೆ

ವಿನಯ ಕುಲಕರ್ಣಿ ಎದುರು ದಾಖಲೆ ತೆರೆದಿಟ್ಟ ಸಿಬಿಐ

Dharwad

ಹುಬ್ಬಳ್ಳಿ: ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಮೂರು ದಿನ ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ಶನಿವಾರ ಅವರ 52ನೇ ಜನ್ಮದಿನದಂದೇ ಇಲ್ಲಿನ ಗೋಕುಲ ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಮೈದಾನದ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಸುಮಾರು 10 ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದರು.

ಬೆಳಗಾವಿ ಹಿಂಡಲಗಾ ಜೈಲಿನಿಂದ ನೇರವಾಗಿ ನರೇಂದ್ರ ಬೈಪಾಸ್ ಮಾರ್ಗವಾಗಿ ಗೋಕುಲ ರಸ್ತೆಯ ಸಿಎಆರ್ ಮೈದಾನಕ್ಕೆ ಬೆಳಗ್ಗೆ 9 ಗಂಟೆಗೆ ಸಿಬಿಐ ಅಧಿಕಾರಿ ರಾಕೇಶ ರಂಜನ್ ಸೇರಿ ಐವರು ಸಿಬಿಐ ಅಧಿಕಾರಿಗಳ ತಂಡ ವಿನಯ ಅವರನ್ನು ಕರೆತಂದಿತು. ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಮೊದಲೇ ಎರಡು ಸೂಟ್​ಗಳನ್ನು ಸಿಬಿಐ ಪಡೆದಿತ್ತು. ಒಂದು ಮನೆಯಲ್ಲಿ ಅಧಿಕಾರಿಗಳು, ಮತ್ತೊಂದರಲ್ಲಿ ವಿನಯ ಕುಲಕರ್ಣಿಗೆ ವ್ಯವಸ್ಥೆ ಮಾಡಲಾಗಿತ್ತು. ಒಳಗೆ ಯಾರೂ ಬಾರದಂತೆ ಪೊಲೀಸರು ಭಾರಿ ಬಿಗಿ ಭದ್ರತೆ ಕೈಗೊಂಡಿದ್ದರು. ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು.

ಯೋಗೀಶಗೌಡ ಕೊಲೆ ಪ್ರಕರಣದ ಕುರಿತು ಸಿಬಿಐ ಅಧಿಕಾರಿಗಳು ಮಾಜಿ ಸಚಿವರನ್ನು ತಮ್ಮದೇ ವಿಧಾನದಲ್ಲಿ ವಿಚಾರಣೆಗೆ ಗುರಿಪಡಿಸಿದರು. ಯೋಗೀಶಗೌಡ ಜತೆಗಿನ ಸಂಬಂಧ ಹೇಗಿತ್ತು, ಕೊಲೆಯಾದ ಹಿಂದಿನ ದಿನ ಮುಂದಿನ ದಿನ ನೀವು ಎಲ್ಲಿದ್ದಿರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು ಎಂದು ತಿಳಿದುಬಂದಿದೆ.

2016ರ ಜೂ. 15ರಂದು ಯೋಗೀಶಗೌಡ ಹತ್ಯೆಗೆ ಮುನ್ನ ಮತ್ತು ನಂತರ ವಿನಯ ಕುಲಕರ್ಣಿ ದೆಹಲಿಗೆ ಭೇಟಿ ನೀಡಿದ್ದು, ಈ ಭೇಟಿಗೆ ಪೂರ್ವನಿರ್ಧರಿತ ಕಾರಣ ಇತ್ತೆ? ದೆಹಲಿಯಲ್ಲಿ ಯಾರನ್ನು ಭೇಟಿಯಾದಿರಿ, ಬೆಂಗಳೂರಿನ ಮೌರ್ಯ ಹೋಟೆಲ್​ನಲ್ಲಿ ಕೊಠಡಿ ಕಾಯ್ದಿರಿಸಿದ್ದು ಏಕೆ... ಹೀಗೆ ಅನೇಕ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದರು. ಕುಲಕರ್ಣಿ ಕೆಲವು ನಕಾರಾತ್ಮಕ ಉತ್ತರ ನೀಡಿದಾಗ ದಾಖಲೆಗಳನ್ನು ತೆಗೆದು ಎದುರಿಗೆ ಇಟ್ಟ ಅಧಿಕಾರಿಗಳು ಇದು ಸುಳ್ಳೇನು...? ಎಂದು ಕೇಳಿ, ಉತ್ತರ ಪಡೆದು ಮುಂದಿನ ಪ್ರಶ್ನೆಗೆ ತೆರಳಿದರು ಎಂದು ಗೊತ್ತಾಗಿದೆ.

ಯಾವುದೋ ಪ್ರಶ್ನೆಗೆ ನೆನಪಿಲ್ಲ... ಎಂದು ಆರೋಪಿತ ಹೇಳಿದಾಗ ಅಧಿಕಾರಿಗಳು ಸಮಯ ತಗೊಳ್ಳಿ... ನೆನಪು ಮಾಡಿಕೊಳ್ಳಿ... ಎಂದರು, ಕಡೆಗೆ ಯಾವುದೋ ದಾಖಲೆಯನ್ನು ಎದುರು ಇಟ್ಟು ಈಗ ನೆನಪಾಗುತ್ತದೆಯೇ...? ಎಂದು ಮರುಪ್ರಶ್ನೆ ಹಾಕುವ ಮೂಲಕ ತಮ್ಮ ಬಳಿ ಬಲವಾದ ಪುರಾವೆ ಇದೆ ಎಂದು ಪರೋಕ್ಷವಾಗಿ ಮನದಟ್ಟು ಮಾಡಿಕೊಟ್ಟು, ಸರಿಯಾದ ಉತ್ತರ ನೀಡಲು ಕೆಲವು ನಿಮಿಷಗಳ ಕಾಲಾವಕಾಶವನ್ನೂ ನೀಡಿದರು ಎನ್ನಲಾಗಿದೆ.

ವಿನಯ ಕುಲಕರ್ಣಿ ಮೇಲೆ ತನಿಖಾಧಿಕಾರಿಗಳು ಯಾವುದೇ ಒತ್ತಡ ಹಾಕಿಲಿಲ್ಲ. ನೀರು, ಚಹಾ-ಕಾಫಿ ಸೇರಿ ಏನು ಬೇಕಾದರೂ ಕೇಳಿ... ಎನ್ನುತ್ತ ಗೌರವದಿಂದ ನಡೆದುಕೊಂಡರು ಎಂದು ತಿಳಿದುಬಂದಿದೆ. ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿಯನ್ನು ಸಿಎಆರ್ ಕೇಂದ್ರ ಸ್ಥಾನದಲ್ಲೇ ಉಳಿಸಿಕೊಂಡಿದೆ.

ಬಿಗಿ ಬಂದೋಬಸ್ತ್: ಸಿಎಆರ್ ಮೈದಾನದ ಹೊರಗೆ ಡಿಸಿಪಿ ಪಿ. ಕೃಷ್ಣಕಾಂತ, ಎಸಿಪಿ ಶಂಕರ ರಾಗಿ ನೇತೃತ್ವದ ತಂಡ ಭದ್ರತೆ ಕೈಗೊಂಡಿತ್ತು. ಗೇಟ್ ಬಳಿ ಹಾಗೂ ರಸ್ತೆಯಲ್ಲಿ ಜಿಗ್ ಜಾಗ್ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಭದ್ರತೆ ದೃಷ್ಟಿಯಿಂದ ಸಿಎಆರ್ ಮೈದಾನದ ಹೊರಗಿದ್ದ ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಮೈದಾನದ ಹಿಂಬದಿ ಇರುವ ಬಂಜಾರಾ ಕಾಲನಿಗೆ ತೆರಳುವವರನ್ನೂ ವಾಪಸ್ ಕಳುಹಿಸಲಾಯಿತು.

ಮಧ್ಯಾಹ್ನ 12 ಗಂಟೆಗೆ ಧಾರವಾಡ ಉಪ ನಗರ ಠಾಣೆಯಲ್ಲಿದ್ದ ವಿನಯ ಕುಲಕರ್ಣಿಯ ಮಾಜಿ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡ ಹಾಗೂ ಇತರ ದಾಖಲೆಗಳೊಂದಿಗೆ ಸಿಬಿಐ ತಂಡ ಹುಬ್ಬಳ್ಳಿಯ ಸಿಎಆರ್ ಮೈದಾನಕ್ಕೆ ಆಗಮಿಸಿತು.

ವಿನಯ ಕುಟುಂಬಸ್ಥರು ಆಗಮಿಸಿದ್ದ ವೇಳೆ ಗೇಟ್ ಬಳಿ ಕೆಲ ಬೆಂಬಲಿಗರು- ಪೊಲೀಸರ ನಡುವೆ ವಾಗ್ವಾದ ಉಂಟಾಗಿತ್ತು. ಗೇಟ್ ಬಳಿ ನಿಲ್ಲದಂತೆ ಪೊಲೀಸರು ಸೂಚಿಸಿದರೂ ಕೇಳದಿದ್ದಾಗ ವಾಗ್ವಾದ ಉಂಟಾಗಿತ್ತು.

ಕಾಂಗ್ರೆಸ್​ನಿಂದ ಜನ್ಮದಿನಾಚರಣೆ

ಅತ್ತ ಸಿಎಆರ್ ಮೈದಾನದ ಒಳಗೆ ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ಅಧಿಕಾರಿಗಳಿಂದ ತೀವ್ರ ವಿಚಾರಣೆಗೆ ಒಳಪಟ್ಟಿದ್ದರೆ, ಇತ್ತ ಕಾಂಗ್ರೆಸ್ ಕಾರ್ಯಕರ್ತರು, ವಿನಯ ಬೆಂಬಲಿಗರು ಸಿಎಆರ್ ಮೈದಾನದ ಹೊರಗೆ ರಸ್ತೆಬದಿ ವಿನಯ ಕುಲಕರ್ಣಿ ಭಾವಚಿತ್ರ ಇದ್ದ 5 ಕೆ.ಜಿ. ತೂಕದ ಕೇಕ್ ಕತ್ತರಿಸಿ ಸಂಭ್ರಮಿಸಿದರು. ‘ವಿಕೆ ಬಾಸ್​ಗೆ ಜಯವಾಗಲಿ’ ಎಂದು ಘೊಷಣೆ ಕೂಗಿದರು. ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಚನ್ನಬಸಪ್ಪ ಮಟ್ಟಿ, ಪ್ರಕಾಶ ಕ್ಯಾರಕಟ್ಟಿ, ನಾಗರಾಜ ಗೌರಿ, ಮತ್ತಿತರರು ಇದ್ದರು.

ಊಟ, ತಿಂಡಿಗೆ ಹಣ ಕೊಟ್ಟ ಸಿಬಿಐ

ಪೊಲೀಸರು ಬೆಳಗ್ಗೆ 9.30ಕ್ಕೆ ವಿನಯ ಅವರಿಗೆ ಇಡ್ಲಿ- ವಡಾ ತಂದು ಕೊಟ್ಟರು. ಮಧ್ಯಾಹ್ನ 1.30ಕ್ಕೆ ಸಸ್ಯಾಹಾರಿ ಊಟ ತಂದು ಕೊಟ್ಟರು. ಸಿಬಿಐ ತಂಡ ಊಟ, ಉಪಾಹಾರದ ಬಿಲ್ ಪಡೆದು ಪೊಲೀಸರಿಗೆ ಹಣ ನೀಡಿತು. ಪ್ರತಿಯೊಂದಕ್ಕೂ ಬಿಲ್ ಪಡೆದು ಹಣ ಕೊಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ರೀತಿ ವಿಕೆ ಬೆಳೆಯುತ್ತಾರೆ

ಈ ಪ್ರಕರಣ ರಾಜಕೀಯ ಪ್ರೇರಿತ. ಡಾ. ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ ಅಂಥವರ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸದೇ ಕೇವಲ ಯೋಗೀಶಗೌಡ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಕುತಂತ್ರದಿಂದ ಜೈಲಿಗೆ ಹಾಕಿದ್ದರು. ಅವರು ಮತ್ತೆ ಹೊರಗೆ ಬಂದು ಶಕ್ತಿ ಹೆಚ್ಚಿಸಿಕೊಂಡು ಕೆಪಿಸಿಸಿ ಅಧ್ಯಕ್ಷರಾದರು. ವಿನಯ ಕುಲಕರ್ಣಿ (ವಿಕೆ) ಅವರು ಏನೂ ತಪ್ಪು ಮಾಡಿಲ್ಲ. ಸಿಬಿಐ ವಿಚಾರಣೆ ನಡೆಯಲಿ. ಆದಷ್ಟು ಬೇಗ ಹೊರಗೆ ಬರುತ್ತಾರೆ. ಡಿಕೆಶಿ ರೀತಿ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಅನಿಲಕುಮಾರ ಪಾಟೀಲ ಹೇಳಿದರು.

ವಿಚಾರಣೆಗೆ ಹಾಜರಾದ ನ್ಯಾಮಗೌಡ

ಧಾರವಾಡ: ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಶೇಖರ ನ್ಯಾಮಗೌಡ ಶನಿವಾರ ಸಹ ವಿಚಾರಣೆಗೆ ಆಗಮಿಸಿದ್ದರು. ಶುಕ್ರವಾರ 4 ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದ ಸೋಮಶೇಖರ ಅವರಿಗೆ ಶನಿವಾರ ಸಹ ಆಗಮಿಸುವಂತೆ ಸಿಬಿಐ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಶನಿವಾರ ಬೆಳಗ್ಗೆಯೇ ಉಪನಗರ ಠಾಣೆಗೆ ಸೋಮಶೇಖರ ಆಗಮಿಸಿದ್ದರು. ಅಧಿಕಾರಿಗಳು ಕೆಲ ಮಹತ್ವದ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ಸೋಮಶೇಖರ ಅವರನ್ನು ಕರೆದುಕೊಂಡು ಹುಬ್ಬಳ್ಳಿಗೆ ಬಂದರು.

ದಿನದ ಪ್ರಮುಖ ಘಟನೆಗಳು

* ಬೆಳಗ್ಗೆ 9ಕ್ಕೆ ಸಿಎಆರ್ ಮೈದಾನದಕ್ಕೆ ವಿನಯ ಕುಲಕರ್ಣಿಯನ್ನು ಕರೆತಂದ ಸಿಬಿಐ

* 10 ಗಂಟೆಗೆ ಉಪಾಹಾರ

* 10.30ರಿಂದ ವಿಚಾರಣೆ ಆರಂಭ

* 12 ಗಂಟೆಗೆ ವಿನಯ ಆಪ್ತ ನ್ಯಾಮಗೌಡ ಆಗಮನ

* 2 ಗಂಟೆಗೆ ಹೊರಗೆ ಕಾರ್ಯಕರ್ತರಿಂದ ಜನ್ಮ ದಿನಾಚರಣೆ

* 2.30ಕ್ಕೆ ಊಟ

* 3.30ಕ್ಕೆ ಪತ್ನಿ, ಮಕ್ಕಳ ಭೇಟಿ

* ಸಂಜೆ ಚಹಾ, ಬಿಸ್ಕತ್ ಸೇವನೆ

* ಮತ್ತೆ ಸಿಬಿಐ ಅಧಿಕಾರಿಗಳಿಂದ ವಿಚಾರಣೆ

* 7.45ಕ್ಕೆ ಇಂದಿನ ವಿಚಾರಣೆ ಅಂತ್ಯ

* ರಾತ್ರಿ 8 ಗಂಟೆಗೆ ಊಟ ಮಾಡಿದ ಕುಲಕರ್ಣಿ

ಪೊಲೀಸ್ ಕ್ವಾರ್ಟರ್ಸ್​ನಲ್ಲೇ ವಾಸ್ತವ್ಯ

ಹುಬ್ಬಳ್ಳಿ: ವಿನಯ ಕುಲಕರ್ಣಿ ಅವರಿಗೆ ರಾತ್ರಿ ವಾಸ್ತವ್ಯಕ್ಕೆ ಗೋಕುಲ ರಸ್ತೆಯ ಸಿಎಆರ್ ಮೈದಾನದ ಪೊಲೀಸ್ ಕ್ವಾರ್ಟರ್ಸ್​ನಲ್ಲೇ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7.40ಕ್ಕೆ ವಿನಯ ಹಾಗೂ ಮಾಜಿ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡ ವಿಚಾರಣೆ ಅಂತ್ಯವಾಯಿತು. ಇಬ್ಬರನ್ನೂ ಮುಖಾಮುಖಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಬಳಿಕ ಸೋಮಶೇಖರ ಅವರನ್ನು ಸಿಬಿಐ ತಮ್ಮ ವಾಹನದಲ್ಲೇ ಧಾರವಾಡಕ್ಕೆ ವಾಪಸ್ ಕಳುಹಿಸಿತು. ಅಗತ್ಯ ಇದ್ದಲ್ಲಿ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದೆ.

ಪೊಲೀಸ್ ಕಾನ್ಸ್​ಟೇಬಲ್​ಗಳ ಕಾಯಂ ವಾಸ್ತವ್ಯಕ್ಕೆ ಕೊಡುವಂಥ ಮನೆಯಲ್ಲಿ ವಿನಯ ಕುಲಕರ್ಣಿ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ನೀರು, 1 ಫ್ಯಾನ್ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿಯೂ ಸಸ್ಯಾಹಾರ ಊಟ ನೀಡಲಾಗಿತ್ತು. ಭಾನುವಾರ ಬೆಳಗ್ಗೆ 8.30ರಿಂದ ಮತ್ತೆ ವಿಚಾರಣೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.

ವಿನಯ ಪರ ಕಾಂಗ್ರೆಸ್ ಪಕ್ಷವಿದೆ

ಧಾರವಾಡ: ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ಮಾಜಿ ಸಚಿವ ವಿನಯ ಜತೆಗಿರುವುದಾಗಿ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿನಯ ಅವರನ್ನು ಏಕಾಏಕಿ ಬಂಧಿಸಿರುವುದು ವಿಪರ್ಯಾಸದ ಸಂಗತಿ. ಕರೊನಾ ಸಂದರ್ಭದಲ್ಲಿ ಬಂಧಿಸಿ ಗದ್ದಲ ಸೃಷ್ಟಿಸುವ ಅವಶ್ಯಕತೆ ಇರಲಿಲ್ಲ. ಆದರೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಅವರು ದೋಷಮುಕ್ತರಾಗಿ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಯೋಗೀಶಗೌಡ ಗೌಡರನನ್ನು ತಾ.ಪಂ. ಅಧ್ಯಕ್ಷರನ್ನಾಗಿ ಮಾಡಿದ್ದು ವಿನಯ ಕುಲಕರ್ಣಿ. ಈ ಮೂಲಕ ಅವರು ಲಿಂಗಾಯತ ಸಮಾಜಕ್ಕೆ ಪ್ರಾಶಸ್ಱ ನೀಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸತೀಶ ತುರಮರಿ, ರಮೇಶ ತಳಗೇರಿ, ಸಿದ್ದಪ್ಪ ಪ್ಯಾಟಿ, ಮುತ್ತು ಗುರುಬಸನಗೌಡರ, ಸುರೇಶ ಚನ್ನಕೋಟಿ, ಇತರರಿದ್ದರು.