ಹನೂರು: ರಾಮನಗುಡ್ಡೆ ಕೆರೆಗೆ ತಿಂಗಳೊಳಗೆ ಕಾವೇರಿ ನೀರನ್ನು ಹರಿಸುವುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಮುತುವರ್ಜಿ ವಹಿಸಲಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಮಾಹಿತಿ ನೀಡಿದರು.
ತಾಲೂಕಿನ ಮಂಗಲ ಸಮೀಪದ ರಾಮನಗುಡ್ಡೆ ಕೆರೆ ತುಂಬಿಸುವ ಸಂಬಂಧ ಭಾನುವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಸಮಸ್ಯೆ ಹಾಗೂ ಸಲಹೆ, ಸೂಚನೆ ಸ್ವೀಕರಿಸಿ ಮಾತನಾಡಿದರು.
ರಾಮನಗುಡ್ಡೆ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಉತ್ತಮ ಮಳೆಯಾಗದ ಪರಿಣಾಮ ಹಲವು ವರ್ಷಗಳಿಂದ ಡ್ಯಾಂ ಬತ್ತಿ ಹೋಗಿತ್ತು. ಅಂತರ್ಜಲ ಮಟ್ಟ ಕುಸಿತದಿಂದ ರೈತರು ಕೃಷಿ ಮಾಡಲು ತುಂಬ ತೊಂದರೆ ಅನುಭವಿಸುತ್ತಿದ್ದರು. ಕೆರೆಗೆ ನೀರು ತುಂಬಿಸುವಂತೆ ರೈತರು ಮನವಿ ಮಾಡಿದ್ದರು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿತ್ತು. ಈ ದೆಸೆಯಲ್ಲಿ ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಡ್ಯಾಂಗೆ ಬೂದುಬಾಳು ಗ್ರಾಮದ ಬಳಿಯ ನೀರು ಘಟಕದಿಂದ ಕಾವೇರಿ ನೀರು ಸರಬರಾಜಾಗುತ್ತಿರುವ ಸ್ಥಳಕ್ಕೆ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ಹಳ್ಳದ ಮೂಲಕ ರಾಮನಗುಡ್ಡೆ ಕೆರೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಹಳ್ಳದಲ್ಲಿ ಹೂಳೆತ್ತುವ ಕಾಮಗಾರಿಗೆ ಪೂರ್ಣಗೊಂಡಿದೆ. ಜತೆಗೆ ಕೆರೆಯ ಸರ್ವೇ ಕಾರ್ಯವೂ ಮುಗಿದಿದ್ದು, ಗಡಿ ಗುರ್ತಿಸಲಾಗಿದೆ. ಆದರೆ ಬೂದುಬಾಳು ನೀರು ಸರಬರಾಜು ಘಟಕದಿಂದ 180 ಮೀಟರ್ ಕೈಗೊಳ್ಳುವ ಪೈಪ್‌ಲೈನ್ ಕಾಮಗಾರಿಗೆ ಕೊಂಚ ತೊಡಕಾಗಿತ್ತು. ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗಿತ್ತು. ಸರ್ಕಾರದಿಂದ 2.5 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ದೊರಕಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಬಳಿಕ ಪೈಪ್‌ಲೈನ್ ಕಾಮಗಾರಿ ನಡೆಸಿ ತಿಂಗಳೊಳಗೆ ಕೆರೆಗೆ ಕಾವೇರಿ ನೀರನ್ನು ಹರಿಸಲಾಗುವುದು. ಈ ಬಗ್ಗೆ ಕಾಳಜಿ ವಹಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈವರೆಗೂ ಈ ಭಾಗದ ರೈತರು ಅನುಭವಿಸಿದ್ದ ನೀರಿನ ಬವಣೆ ನೀಗಲಿದೆ ಎಂದು ತಿಳಿಸಿದರು.
ಮೋಡ ಬಿತ್ತನೆಗೆ ಮನವಿ: ನಿವೃತ್ತ ಕೃಷಿ ವಿಜ್ಞಾನಿ ಡಾ. ನಿರಂಜನ್ ಮಾತನಾಡಿ, ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಆದರೆ ಹನೂರು ಭಾಗದಲ್ಲಿ ಮಾತ್ರ ಮಳೆಯಾಗದ ಹಿನ್ನೆಲೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ, ಪರಿಣಾಮ ಕೃಷಿಗೆ ಮಾತ್ರವಲ್ಲ, ತೋಟದ ಮನೆಗಳಲ್ಲಿ ಕುಡಿಯುವ ನೀರಿಗೂ ರೈತರು ತುಂಬ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ವಿಶೇಷ ಗಮನಹರಿಸಿ ಈ ಭಾಗದಲ್ಲಿ ಮೋಡ ಬಿತ್ತನೆ ಮಾಡಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಇದಕ್ಕೆ ಶಾಸಕರು, ಯೋಚಿಸಿ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಚಾಲಕ ರಾಜೇಂದ್ರ, ರೈತ ಮುಖಂಡರಾದ ಪ್ರಸಾದ್, ಶ್ರೀನಿವಾಸ್, ಮಾದಪ್ಪ, ಡೇವಿಡ್, ಪಳನಿಸ್ವಾಮಿ, ವಿಜಯಕುಮಾರ್, ರುದ್ರಪ್ಪ ಹಾಗೂ ಮಂಗಲ, ಗುಂಡಾಪುರ, ಯಡಳ್ಳಿದೊಡ್ಡಿ, ಚಿಂಚಳ್ಳಿ, ಮಣಗಳ್ಳಿ, ಶಾಗ್ಯ ಭಾಗದ ರೈತರು ಇದ್ದರು.