ಜಿಲ್ಲೆ

ಮಹದೇವಪುರ ವಲಯದ 21 ಐಟಿ ಪಾರ್ಕ್​ಗಳಿಗೆ ಕಾವೇರಿ ನೀರು ಪೂರೈಕೆ; ಪೈಪ್​ಲೈನ್​ ಮೂಲಕ ಸರಬರಾಜು

ಬೆಂಗಳೂರು: ಮಹದೇವಪುರ ವಲಯದ 21 ಐಟಿ ಪಾರ್ಕ್​ಗಳಿಗೆ ಅಗತ್ಯವಿರುವಷ್ಟು ಕಾವೇರಿ ನೀರನ್ನು ಸರಬರಾಜು ಮಾಡಲು ಜಲಮಂಡಳಿ ಸಿದ್ದವಿದೆ. ಐಟಿ ಕಂಪನಿಗಳ ನೀರಿನ ಕೊರತೆಯನ್ನು ಪರಿಹರಿಸಲಾಗಿದ್ದು, ಕಾವೇರಿ ನೀರಿನ ಬೇಡಿಕೆ ಇಟ್ಟ ಕಂಪನಿಗಳಿಗೆ ಕಾವೇರಿ ನಾಲ್ಕನೇ ಹಂತದ ನೀರನ್ನು ಪೈಪ್​ಲೈನ್​ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ಔಟರ್​ ರಿಂಗ್​ ರೋಡ್​ ಕಂಪನೀಸ್​ ಅಸೋಸಿಯೇಷನ್​ ಪದಾಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ನೀರಿನ ಲಭ್ಯತೆ, ಸರಬರಾಜು, ಉಳಿತಾಯ ಹಾಗೂ ಮರುಬಳಕೆಗೆ ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

30 ದಿನಗಳ ಒಳಗೆ ಕಾವೇರಿ ನೀರು ಸರಬರಾಜು

ಮಹದೇಪುರ ವಲಯದಲ್ಲಿ 21 ಐಟಿ ಪಾರ್ಕ್​ಗಳಿದ್ದು, ನೀರಿಗಾಗಿ ಕೊಳವೆಬಾವಿ ಅವಲಂಬಿಸಿವೆ. ಈ ಎಲ್ಲಾ ಪಾರ್ಕ್​ಗಳ ಬಳಕೆಗೆ ಸುಮಾರು 12 ಎಂ.ಎಲ್​.ಡಿ ಕಾವೇರಿ ನೀರಿನ ಅವಶ್ಯಕತೆಯಿದೆ. ಇದರಲ್ಲಿ ಸದ್ಯ ಲಭ್ಯವಿರುವ ಕಾವೇರಿ 4 ನೇ ಹಂತದ ಯೋಜನೆಯಲ್ಲೆ ಸುಮಾರು 5 ಎಂ.ಎಲ್​.ಡಿ ನೀರನ್ನು ನೀಡಬಹುದಾಗಿದೆ. ಆದರೆ, ಇದಕ್ಕೆ ತಗಲುವ ಪೋರೇಟಾ ಹಾಗೂ ಇನ್ನಿತರ ಶುಲ್ಕಗಳನ್ನು ಭರಿಸಿದರೆ 30 ದಿನಗಳಲ್ಲಿ ಪೈಪ್​ಲೈನ್​ ಮೂಲಕ ನೀರು ಸರಬರಾಜು ಪ್ರಾರಂಭಿಸಬಹುದು. ಇನ್ನುಳಿದ ಬೇಡಿಕೆಗೆ ಸಂಸ್ಕರಿಸಿದ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಐಟಿ ಕಂಪೆನಿಗಳಲ್ಲಿ ನೀರಿನ ಕೊರತೆ ಉಂಟಾಗಿದ್ದ ಸಮಯದಲ್ಲಿ ಈ ಹಿಂದೆ ಜಲಮಂಡಳಿ ಅಗತ್ಯ ವ್ಯವಸ್ಥೆ ಮಾಡಿದೆ. ಇದೀಗ ವಿವಿಧ ಕಂಪನಿಗಳು ಕಾವೇರಿ ನೀರಿನ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ.
-ಡಾ.ವಿ.ರಾಮ್​ ಪ್ರಸಾತ್​ ಮನೋಹರ್​, ಅಧ್ಯಕ್ಷ, ಜಲಮಂಡಳಿ