ಜಿಲ್ಲೆ

ತಮಿಳುನಾಡಿಗೆ ನೀರು ಹರಿಸುವಂತೆ ತೀರ್ಪು: ಆದೇಶ ಪಾಲಿಸಿದರೆ ಕೆಆರ್‌ಎಸ್ ಡ್ಯಾಂನಲ್ಲಿ ಖಾಲಿಯಾಗುವ ನೀರೆಷ್ಟು ಗೊತ್ತಾ?

ಕೆ.ಎನ್.ರಾಘವೇಂದ್ರ

ಮಂಡ್ಯ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಆದರೆ ಮತ್ತೆ ತಮಿಳುನಾಡಿಗೆ ನೀರು ಬಿಡಬೇಕೆನ್ನುವ ಆದೇಶ ಕಾವೇರಿ ಕಣಿವೆ ಅದಲ್ಲಿಯೂ ಮಂಡ್ಯ ಜಿಲ್ಲೆಯ ಜನರಿಗೆ ದೊಡ್ಡ ಆಘಾತವನ್ನು ನೀಡಿದೆ.

ಈಗಾಗಲೇ ಬರದಿಂದ ತತ್ತರಿಸಿರುವ ಜಿಲ್ಲೆಯ ಜನರಿಗೆ ಗಾಯದ ಮೇಲೆ ಬರೆ ಎಳೆಯುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಈ ವರ್ಷ ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಬಂದ ತೀರ್ಪುಗಳೆಲ್ಲವೂ ತ.ನಾಡು ಪರವಾಗಿಯೇ ಇರುವುದು ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಇನ್ನು ರೈತರ ಹಿತಗಣಿಸಿ ರಾಜ್ಯಸರ್ಕಾರವೂ ತ.ನಾಡಿಗೆ ನೀರು ಹರಿಸುತ್ತಲೇ ಇದೆ. ಅದೇ ರೀತಿ ಗುರುವಾರದ ಆದೇಶದಂತೆ ಮತ್ತೆ ತ.ನಾಡಿಗೆ ಒಂದು ತಿಂಗಳು ಪ್ರತಿನಿತ್ಯ 2700 ಕ್ಯೂಸೆಕ್ ನೀರು ಹರಿದರೆ ಸುಮಾರು ಐದು ಟಿಎಂಸಿ ನೀರು ಖಾಲಿಯಾಗಲಿದೆ.

124.80 ಅಡಿ ಗರಿಷ್ಟ ಸಂಗ್ರಹದ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಪ್ರಸ್ತುತ ಅಂದರೆ ಗುರುವಾರ ಬೆಳಗ್ಗೆ 99.10 ಅಡಿ ನೀರಿದೆ. 1,450 ಕ್ಯೂಸೆಕ್ ಒಳಹರಿವಿದ್ದರೆ, ಡ್ಯಾಂನಿಂದ 3,840 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ನ.23ರಂದು ಡ್ಯಾಂನಲ್ಲಿ 121.72 ಅಡಿ ನೀರಿನ ಸಂಗ್ರಹವಿತ್ತು. 4,789 ಕ್ಯೂಸೆಕ್ ಒಳಹರಿವು ಹಾಗೂ 6,709 ಕ್ಯೂಸೆಕ್ ಹೊರಹರಿವಿತ್ತು.

ಪ್ರಸ್ತುತ ಡ್ಯಾಂನಲ್ಲಿ 22 ಟಿಎಂಸಿ ನೀರಿದೆ. ತ.ನಾಡಿಗೆ ಐದು ಟಿಎಂಸಿ ಕೊಟ್ಟರೆ ಉಳಿಯುವುದು 17 ಟಿಎಂಸಿ ಮಾತ್ರ. ಇನ್ನು ಪ್ರತಿನಿತ್ಯ ಮಂಡ್ಯ, ಮೈಸೂರು, ಬೆಂಗಳೂರು ಹಾಗೂ ರಾಮನಗರ ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆಂದು ಒಂದು ಸಾವಿರ ಕ್ಯೂಸೆಕ್ ಅಗತ್ಯವಿದೆ. ಆದ್ದರಿಂದ ಇನ್ನೂ ಎಂಟು ತಿಂಗಳು ಕುಡಿಯಲು ನೀರಿನ ಅಗತ್ಯವಿದೆ. ಪ್ರಮುಖವಾಗಿ ಡ್ಯಾಂನ ನೀರಿನ ಮಟ್ಟ 65 ಅಡಿ ಅಂದರೆ ಏಳೂವರೆ ಟಿಎಂಸಿವರೆಗೆ ಮಾತ್ರ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬಹುದು. ಆದ್ದರಿಂದ ಡ್ಯಾಂನಲ್ಲಿರುವ ನೀರನ್ನು ಸಂಗ್ರಹವಿಟ್ಟುಕೊಳ್ಳದಿದ್ದರೆ ಮುಂದೆ ಹಾಹಾಕಾರ ಎದುರಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರದ ನಡೆ ಬಹುಮುಖ್ಯ ಪಾತ್ರ ವಹಿಸಲಿದೆ.